ADVERTISEMENT

ಕೇಂದ್ರದ ಕೃಷಿ ಕಾನೂನುಗಳು ರೈತರಿಗೆ ಡೆತ್ ವಾರಂಟ್ ಇದ್ದಂತೆ: ಅರವಿಂದ ಕೇಜ್ರಿವಾಲ್

ಪಿಟಿಐ
Published 21 ಫೆಬ್ರುವರಿ 2021, 16:37 IST
Last Updated 21 ಫೆಬ್ರುವರಿ 2021, 16:37 IST
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್    

ನವದೆಹಲಿ: ಬಿಜೆಪಿ ಆಡಳಿತದ ಕೇಂದ್ರ ಸರ್ಕಾರವು ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಒತ್ತಾಯಿಸಿದರು. ಅವರು ಭಾನುವಾರ ಪಶ್ಚಿಮ ಉತ್ತರ ಪ್ರದೇಶದ ರೈತ ಮುಖಂಡರನ್ನು ಭೇಟಿಯಾಗಿ, ಇವು ರೈತರಿಗೆ 'ಡೆತ್ ವಾರಂಟ್' ಇದ್ದಂತೆ ಎಂದು ದೂರಿದರು.

ಫೆಬ್ರವರಿ 28 ರಂದು ಪಶ್ಚಿಮ ಉತ್ತರ ಪ್ರದೇಶದ ಮೀರತ್‌ನಲ್ಲಿ 'ಕಿಸಾನ್ ಮಹಾಪಂಚಾಯತ್'ನಲ್ಲಿ ಕೇಜ್ರಿವಾಲ್ ಭಾಷಣ ಮಾಡಲಿದ್ದಾರೆ. ಇದರ ಅಂಗವಾಗಿ ಇಂದು ರೈತ ಮುಖಂಡರನ್ನು ಭೇಟಿ ಮಾಡಿದರು. 2022 ರಲ್ಲಿ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಎಎಪಿ ಈಗಾಗಲೇ ಘೋಷಿಸಿದ್ದು, ಇದು ಕೇಜ್ರಿವಾಲ್ ಅವರ ಮೊದಲ ಭೇಟಿಯಾಗಿದೆ.

ಕೃಷಿ ಕಾನೂನನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ, ವಿಶೇಷವಾಗಿ ನೆರೆಯ ಉತ್ತರಪ್ರದೇಶದೊಂದಿಗಿನ ಗಾಜಿಪುರ ಗಡಿಯಲ್ಲಿ ಸಕ್ರಿಯವಾಗಿರುವ ಪಶ್ಚಿಮ ಉತ್ತರ ಪ್ರದೇಶದ 40ಕ್ಕೂ ಹೆಚ್ಚು ರೈತ ಮುಖಂಡರು ದೆಹಲಿ ವಿಧಾನಸಭೆ ಆವರಣದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು.

ADVERTISEMENT

ಈ ವೇಳೆ ಮಾತನಾಡಿದ ಕೇಜ್ರಿವಾಲ್, 'ಈ ರೈತ ವಿರೋಧಿ ಕಾನೂನುಗಳು ರೈತರಿಗೆ ಡೆತ್ ವಾರಂಟ್‌ಗಳಾಗಿವೆ. ಈ ಕಾನೂನುಗಳ ಅನುಷ್ಠಾನದಿಂದ ರೈತರು ಬೆಳೆದ ಬೆಳೆಗಳು ಕೆಲವೇ ಕೈಗಾರಿಕೋದ್ಯಮಿಗಳ ಕೈಗೆ ಹೋಗುತ್ತವೆ ಮತ್ತು ಭಾರತದ ರೈತರು ತಮ್ಮ ಸ್ವಂತ ಭೂಮಿಯಲ್ಲಿ ಕಾರ್ಮಿಕರಾಗುತ್ತಾರೆ ಎಂದು ಹೇಳಿದರು.

'ಕೇಂದ್ರ ಸರ್ಕಾರವು ತಕ್ಷಣವೇ ಮೂರು ಕರಾಳ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕು ಮತ್ತು ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಅನುಸರಿಸಿ ಎಲ್ಲಾ 23 ಬೆಳೆಗಳ ಮೇಲೆ ಕನಿಷ್ಟ ಬೆಂಬಲ ಬೆಲೆಗೆ ಕಾನೂನು ಖಾತರಿ ನೀಡಬೇಕು'. ಸರ್ಕಾರ ರೈತರೊಂದಿಗೆ ಮಾತನಾಡಬೇಕು. ಸರ್ಕಾರವೇ ರೈತರ ಮಾತನ್ನು ಕೇಳದಿದ್ದರೆ ಮತ್ತೆ ಯಾರು ಕೇಳುತ್ತಾರೆ ಎಂದು ಪ್ರಶ್ನಿಸಿದರು.

'ಫೆಬ್ರವರಿ 28 ರಂದು ಮೀರತ್ ಕಿಸಾನ್ ಮಹಾಪಂಚಾಯತ್‌ನಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಳ್ಳಲಿದ್ದಾರೆ. ಆ ಮಹಾಪಂಚಾಯತ್ ಸಮಯದಲ್ಲಿ ಮೂರು ಕೃಷಿ ಕಾನೂನುಗಳ ಬಗ್ಗೆ ಚರ್ಚೆ ನಡೆಯಲಿದ್ದು, ಅಲ್ಲಿ ಬಿಜೆಪಿ ಆಡಳಿತದ ಕೇಂದ್ರ ಸರ್ಕಾರವು ತಂದಿರುವ ಈ ಕಾನೂನುಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳುವಂತೆ ರೈತರು ಒತ್ತಾಯಿಸಲಿದ್ದಾರೆ' ಎಂದು ಕೇಜ್ರಿವಾಲ್ ಹೇಳಿದರು.

ಈ ಕಾನೂನುಗಳು ರೈತರಿಗೆ ಪ್ರಯೋಜನವನ್ನು ನೀಡುತ್ತವೆ ಎಂದು ಬಿಜೆಪಿ ನಿರಂತರವಾಗಿ ಹೇಳುತ್ತಿದೆ ಆದರೆ ಅದು ಹೇಗೆಂದು ಅದರ ನಾಯಕರು ಇನ್ನೂ ಸ್ಪಷ್ಟಪಡಿಸಿಲ್ಲ ಎಂದು ಅವರು ಹೇಳಿದರು.

ಸಭೆಯಲ್ಲಿ ದೆಹಲಿ ವಿಧಾನಸಭಾ ಸ್ಪೀಕರ್ ರಾಮ್ ನಿವಾಸ್ ಗೋಯೆಲ್, ಕ್ಯಾಬಿನೆಟ್ ಮಂತ್ರಿಗಳಾದ ಕೈಲಾಶ್ ಗೆಹ್ಲೋಟ್ ಮತ್ತು ರಾಜೇಂದ್ರ ಪಾಲ್ ಗೌತಮ್, ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಮತ್ತು ಶಾಸಕ ದಿಲೀಪ್ ಪಾಂಡೆ ಭಾಗವಹಿಸಿದ್ದರು.

ಸುಮಾರು ಮೂರು ತಿಂಗಳುಗಳ ಕಾಲ ದೆಹಲಿ ಗಡಿಯಲ್ಲಿ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ)ನ ಯಾವುದೇ ಪ್ರತಿನಿಧಿ ಸಭೆಯಲ್ಲಿ ಹಾಜರಿರಲಿಲ್ಲ ಎಂದು ಮೂಲಗಳು ತಿಳಿಸಿವೆ. ಸಂಘಟನೆಯು ಈಗಾಗಲೇ ತನ್ನ ಚಳವಳಿಯನ್ನು ರಾಜಕೀಯೇತರ ಎಂದು ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.