ADVERTISEMENT

ರೈತರ ಪ್ರತಿಭಟನೆ ಪರ ದೇಶದಾದ್ಯಂತ ದನಿ: ‘ಬಂದ್‌’ಗೆ ಭಾರಿ ಬೆಂಬಲ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2020, 20:52 IST
Last Updated 6 ಡಿಸೆಂಬರ್ 2020, 20:52 IST
ಬಾಕ್ಸರ್ ವಿಜೇಂದರ್ ಸಿಂಗ್ ಅವರು ದೆಹಲಿಯಲ್ಲಿ ರೈತರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದರು–ಪಿಟಿಐ ಚಿತ್ರ
ಬಾಕ್ಸರ್ ವಿಜೇಂದರ್ ಸಿಂಗ್ ಅವರು ದೆಹಲಿಯಲ್ಲಿ ರೈತರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದರು–ಪಿಟಿಐ ಚಿತ್ರ   

ನವದೆಹಲಿ: ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ಡಿ.8 ಮಂಗಳವಾರ ‘ಭಾರತ ಬಂದ್’ಗೆ ಕರೆ ನೀಡಿದ್ದು, ಇದಕ್ಕೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಗುಪ್ಕರ್ ಗುಂಪಿನ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಎಸ್‌ಪಿ ನಾಯಕ ಅಖಿಲೇಶ್ ಯಾದವ್ ಹಾಗೂ ಎಡಪಕ್ಷಗಳ ಮುಖಂಡರು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಆಮ್ ಆದ್ಮಿ ಪಾರ್ಟಿ, ತೃಣಮೂಲ ಕಾಂಗ್ರೆಸ್, ಟಿಆರ್‌ಎಸ್, ಶಿವಸೇನಾ, ಅಕಾಲಿದಳಗಳೂ ಬೆಂಬಲ ನೀಡಿವೆ. ಡಿ.8ರಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಕಾಂಗ್ರೆಸ್ ಘೋಷಿಸಿದೆ.

ADVERTISEMENT

ಇಂಡಿಯನ್ ಟೂರಿಸ್ಟ್ ಟ್ರಾನ್ಸ್‌ಪೋರ್ಟ್ ಸಂಘಟನೆ, ದೆಹಲಿ ಗೂಡ್ಸ್ ಟ್ರಾನ್ಸ್‌ಪೋರ್ಟ್ ಸಂಘಟನೆಗಳು,
ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟ, ಆಫೀಸರ್ಸ್ ಯೂನಿಯನ್, ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಷನ್ ಮೊದಲಾದ ಸಂಘಟನೆಗಳು ರೈತರ ಪರ ನಿಂತಿವೆ.

ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸುವ ಯತ್ನ: ಎನ್‌ಡಿಎ ವಿರುದ್ಧ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸುವ ಯತ್ನದಲ್ಲಿ ಅಕಾಲಿದಳ ನಿರತವಾಗಿವೆ. ಶಿವಸೇನಾ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷಗಳನ್ನು ಅಕಾಲಿದಳ ಸಂಸದ ಪ್ರೇಮ್ ಸಿಂಗ್ ಚಂದ್ರುಮರ್ಜಾ ಅವರು ಸಂಪರ್ಕಿಸಿದ್ದಾರೆ.

‘ಕಾಂಗ್ರೆಸ್, ಎನ್‌ಸಿಪಿ ಹಾಗೂ ಶಿವಸೇನಾ ಪಕ್ಷಗಳು ರೈತರ ಬೆನ್ನಿಗೆ ನಿಂತಿವೆ. ರೈತರು ದೇಶದ ಬೆನ್ನೆಲುಬು. ಅವರ ಸಂಕಷ್ಟಗಳನ್ನು ಪರಿಹರಿಸುವುದು ಸರ್ಕಾರದ ಆದ್ಯ ಕರ್ತವ್ಯ’ ಎಂದು ಉದ್ಧವ್‌ ಠಾಕ್ರೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.