ADVERTISEMENT

ರಾಜಕೀಯ ಉದ್ದೇಶಕ್ಕಾಗಿ ಕೃಷಿ ಕಾಯ್ದೆಗಳನ್ನು ವಿರೋಧಿಸುತ್ತಿದ್ದಾರೆ: ಹರಿಯಾಣ ಸಿಎಂ

ಪಿಟಿಐ
Published 21 ಡಿಸೆಂಬರ್ 2020, 3:38 IST
Last Updated 21 ಡಿಸೆಂಬರ್ 2020, 3:38 IST
ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್
ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್   

ಚಂಡೀಗಡ: ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳನ್ನು ಬೆಂಬಲಿಸಿರುವ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ರಾಜಕೀಯ ಉದ್ದೇಶಕ್ಕಾಗಿ ಬೆರಳೆಣಿಕೆಯಷ್ಟು ಜನರು ಮಾತ್ರ ವಿರೋಧಿಸುತ್ತಿದ್ದಾರೆ ಎಂದು ಹೇಳಿದರು.

ಪ್ರಜಾತಂತ್ರದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯಗಳನ್ನು ಮಂಡಿಸುವ ಹಕ್ಕಿದೆ. ಆದರೆ ರಸ್ತೆಗಳನ್ನು ತಡೆಗಟ್ಟುವ ಮೂಲಕ ಒತ್ತಡ ಹೇರಲು ಸಾಧ್ಯವಿಲ್ಲ ಎಂದು ಹೇಳಿದರು.

ಭಾನುವಾರ ದಕ್ಷಿಣ ಹರಿಯಾಣದ ನರ್ನೌಲ್‌ನಲ್ಲಿ ನಡೆದ 'ಜಲ್ ಅಧಿಕಾರ್ ರ‍್ಯಾಲಿ' ಉದ್ದೇಶಿಸಿ ಮಾತನಾಡಿದ ಬಿಜೆಪಿ ಹಿರಿಯ ಮುಖಂಡ ಖಟ್ಟರ್, 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಇದನ್ನು ಹಲವು ಹಂತಗಳಲ್ಲಿ ಮಾಡಲಾಗುವುದು. ಕೃಷಿ ಸುಧಾರಣಾ ಕಾಯ್ದೆಗಳು ಇದರಲ್ಲಿ ಒಂದಾಗಿದೆ ಎಂದು ತಿಳಿಸಿದರು.

ADVERTISEMENT

ಆದರೆ ರಾಜಕೀಯ ಪ್ರೇರಿತ ಬೆರಳೆಣಿಕೆಯಷ್ಟು ಜನರು ಈ ಕಾಯ್ದೆಗಳನ್ನು ವಿರೋಧಿಸುತ್ತಿದ್ದಾರೆ. ನಾನು ಅವರನ್ನು ರೈತರ ಪ್ರತಿನಿಧಿಗಳೆಂದು ಕರೆಯುವುದಿಲ್ಲ ಎಂದು ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ಸಮರ್ಥಿಸಿದರು.

ಪ್ರತಿಭಟಿಸಲು ಹಲವು ಮಾರ್ಗಗಳಿವೆ. ಮಾಧ್ಯಮಗಳ ಮೂಲಕ ಜನರ ನಡುವೆ ಹೋಗಿ ಸಭೆ ನಡೆಸಬಹುದು. ಆದರೆ 50,000ದಿಂದ 70,000 ಜನರನ್ನು ಒಟ್ಟುಗೂಡಿಸಿ ರಸ್ತೆಗಳನ್ನು ತಡೆಗಟ್ಟುವ ಮೂಲಕ ಒತ್ತಡ ಹೇರುವುದು...ಪ್ರಜಾಪ್ರಭುತ್ವ ಅಂತಹ ಕಾರ್ಯಗಳಿಗಾಗಿ ಅಲ್ಲ ಎಂದು ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಇದಕ್ಕೆ ಸ್ಥಾನವಿಲ್ಲ. ಸರ್ಕಾರಗಳು ಇದಕ್ಕೆ ತಲೆ ಬಾಗಿದರೆ ದೇಶವು ತಪ್ಪಾದ ದಿಕ್ಕಿನಲ್ಲಿ ಸಾಗಲಿದೆ. ಬಹಳ ಕಷ್ಟಪಟ್ಟು ನಾವು ಪ್ರಜಾಪ್ರಭುತ್ವವನ್ನು ಸ್ಥಾಪಿಸಿದ್ದೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.