ADVERTISEMENT

ರೈತರ ಹೋರಾಟ ಬೆಂಬಲಿಸಿ ಸಿಖ್‌ ಧರ್ಮಗುರುವಿನ ಆತ್ಮಹತ್ಯೆ: ಹರಿಯಾಣ ಸಿಎಂ ಬೇಸರ

ಏಜೆನ್ಸೀಸ್
Published 17 ಡಿಸೆಂಬರ್ 2020, 7:26 IST
Last Updated 17 ಡಿಸೆಂಬರ್ 2020, 7:26 IST
ಸಂತ ರಾಮ್‌ ಸಿಂಗ್‌ (ಟ್ವಿಟರ್‌ ಚಿತ್ರ)
ಸಂತ ರಾಮ್‌ ಸಿಂಗ್‌ (ಟ್ವಿಟರ್‌ ಚಿತ್ರ)   

ನವದೆಹಲಿ: ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಿ ಆತ್ಮಹತ್ಯೆಗೆ ಶರಣಾದ ಸಿಖ್‌ ಧರ್ಮಗುರು, ಸಂತ ರಾಮ್‌ ಸಿಂಗ್‌ ಅವರ ಸಾವಿಗೆ ಹರಿಯಾಣ ಮುಖ್ಯಮಂತ್ರಿ ಎಂ.ಎಲ್‌.ಖಟ್ಟರ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಗುರುವಾರ ಟ್ವೀಟ್‌ ಮಾಡಿರುವ ಅವರು, ' ಬಾಬಾ ರಾಮ್ ಸಿಂಗ್ ಸಾವಿನಿಂದ ನನಗೆ ಬೇಸರವಾಗಿದೆ. ಅವರು ತಮ್ಮ ಜೀವನವನ್ನು ಜನರ ಸೇವೆಗಾಗಿ ಮುಡಿಪಾಗಿಟ್ಟಿದ್ದರು ಮತ್ತು ಅನ್ಯರಿಗಾಗಿ ಮಾತ್ರ ಬದುಕಿದರು' ಎಂದು ತಿಳಿಸಿದ್ದಾರೆ.

ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬಾಬಾ ರಾಮ್ ಸಿಂಗ್ ಬೆಂಬಲ ನೀಡಿದ್ದರು. ರೈತರ ಪ್ರತಿಭಟನಾ ಸ್ಥಳವಾದ ದೆಹಲಿಯ ಸಿಂಘು ಗಡಿಯಲ್ಲೇ ಗುಂಡು ಹಾರಿಸಿಕೊಂಡು ರಾಮ್‌ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ADVERTISEMENT

ಅವರು ಆತ್ಮಹತ್ಯೆ ಮಾಡಿಕೊಂಡ ಜಾಗದಲ್ಲಿ, 'ರೈತರ ಸಂಕಷ್ಟಗಳನ್ನು ನೋಡಲು ನನ್ನಿಂದ ಸಾಧ್ಯವಾಗುತ್ತಿಲ್ಲ. ರೈತರನ್ನು ಬೆಂಬಲಿಸಿ ಕೆಲವರು ತಮ್ಮ ಪ್ರಶಸ್ತಿಗಳನ್ನು ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ. ನಾನು ಪ್ರಾಣತ್ಯಾಗ ಮಾಡಲು ನಿರ್ಧರಿಸಿದ್ದೇನೆ' ಎಂದು ಬರೆಯಲಾಗಿರುವ ಪತ್ರವೊಂದು ದೊರಕಿದೆ.

ಬಾಬಾ ರಾಮ್‌ ಸಿಂಗ್‌ ಅವರ ಸಾವಿಗೆ ಬೇಸರ ವ್ಯಕ್ತಪಡಿಸಿರುವ ಪ್ರತಿಪಕ್ಷಗಳು ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿವೆ.

'ಕೇಂದ್ರ ಸರ್ಕಾರದ ಕ್ರೌರ್ಯವು ಎಲ್ಲ ಮಿತಿಗಳನ್ನು ಮೀರುತ್ತಿದೆ' ಎಂದು ಪ್ರತಿಪಕ್ಷಗಳ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ತಂದಿರುವ ಹೊಸ ಕಾಯ್ದೆಗಳನ್ನು ರದ್ದು ಮಾಡುವಂತೆ ಆಗ್ರಹಿಸಿ ರೈತರು ದೆಹಲಿ ಗಡಿಯಲ್ಲಿ ಮೂರು ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.