ADVERTISEMENT

ಅಗತ್ಯವಿದ್ದರೆ ಕೃಷಿ ಕಾಯ್ದೆ ತಿದ್ದುಪಡಿಗೆ ಸರ್ಕಾರ ಸಿದ್ಧ: ರಾಜನಾಥ್ ಸಿಂಗ್

ಪಿಟಿಐ
Published 11 ಫೆಬ್ರುವರಿ 2021, 14:07 IST
Last Updated 11 ಫೆಬ್ರುವರಿ 2021, 14:07 IST
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್   

ನವೆದಹಲಿ: ನೂತನ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಹಾದಿ ತಪ್ಪಿಸಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಆರೋಪಿಸಿದ್ದಾರೆ.

ಅದೇ ಹೊತ್ತಿಗೆ ನೂತನ ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ರೈತರೊಂದಿಗೆ ಮುಕ್ತವಾಗಿ ಚರ್ಚಿಸಲು ತಯಾರಾಗಿದ್ದು, ಅಗತ್ಯವಿದ್ದರೆ ತಿದ್ದುಪಡಿ ಮಾಡಲು ಸರ್ಕಾರ ಸಿದ್ಧವಾಗಿದೆ ಎಂದುಸ್ಪಷ್ಟನೆ ನೀಡಿದರು.

ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಸಂಸತ್ತಿನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಈಗಿರುವ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮುಂದುವರಿಯಲಿದೆ. ಅಲ್ಲದೆ ರೈತರು ಉತ್ಪಾದಿಸುವ ಬೆಳೆಗೆ ವಹಿವಾಟು ನಡೆಯಲಿದ್ದು, ಜಮೀನಿಗೆ ಅಲ್ಲ ಎಂದು ಮಾಜಿ ಕೃಷಿ ಸಚಿವರೂ ಆಗಿರುವ ರಾಜನಾಥ್ ಸಿಂಗ್ ತಿಳಿಸಿದರು.

ADVERTISEMENT

ಇನ್ನು ಮುಂದೆ ಸಗಟು ಮಾರುಕಟ್ಟೆ ಅಸ್ತಿತ್ವದಲ್ಲಿ ಇರುವುದಿಲ್ಲ, ಎಂಎಸ್‌ಪಿ ವ್ಯವಸ್ಥೆಯು ಕೊನೆಗೊಳ್ಳುತ್ತದೆ ಮತ್ತು ರೈತರ ಭೂಮಿಯನ್ನು ಅಡಮಾನ ಇಡಲಾಗುತ್ತದೆ ಎಂಬುದಕ್ಕೆ ಸಂಬಂಧಿಸಿದಂತೆ ಗೊಂದಲವನ್ನು ಸೃಷ್ಟಿ ಮಾಡಲಾಗಿದೆ. ಸ್ವಹಿತಾಸಕ್ತಿ ಹೊಂದಿರುವ ಗುಂಪು ರೈತರನ್ನು ಹಾದಿ ತಪ್ಪಿಸುತ್ತಿದೆ ಎಂದು ರಾಜನಾಥ್ ಸಿಂಗ್ ಆರೋಪಿಸಿದರು.

ಇದೇ ಸಂದರ್ಭದಲ್ಲಿ ನರೇಂದ್ರ ಮೋದಿ ಮಾತುಗಳನ್ನು ರಾಜನಾಥ್ ಸಿಂಗ್ ಪುನರುಚ್ಛರಿಸಿದ್ದು, ಎಂಎಸ್‌ಪಿ ಇತ್ತು, ಎಂಎಸ್‌ಪಿ ಇದೆ ಮತ್ತು ಎಂಎಸ್‌ಪಿ ಇರುತ್ತದೆ ಎಂದು ಹೇಳಿದರು.

ಹಾಗೊಂದು ವೇಳೆ ಕೃಷಿ ಕಾಯ್ದೆಗಳಲ್ಲಿ ತಿದ್ದುಪಡಿ ಅಗತ್ಯವಿದ್ದರೆ ರೈತರೊಂದಿಗೆ ಮುಕ್ತವಾಗಿ ಚರ್ಚಿಸಲು ಸರ್ಕಾರ ಸಿದ್ಧವಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.