
ಭೋಪಾಲ್: ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ವಿರೋಧಿಸಿ ಪ್ರತಿಭಟಿಸಲು ಭೋಪಾಲ್‌ನಲ್ಲಿ ಮಂಗಳವಾರ ಆಯೋಜಿಸಿರುವ ಪಕ್ಷದ ‘ರೈತರ ಮಹಾ ಸಮ್ಮೇಳನ’ದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ರೈತರೊಂದಿಗೆ ಸಂವಾದ ನಡೆಸಲಿದ್ದಾರೆ.
‘ಇಲ್ಲಿನ ಜವಾಹರ್ ಚೌಕ್‌ನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಒಪ್ಪಂದವು ರೈತರು ಮತ್ತು ದೇಶದ ಹಿತಾಸಕ್ತಿಗಳಿಗೆ ಹೇಗೆ ವಿರುದ್ಧವಾಗಿದೆ ಎಂಬುದನ್ನು ವಿವರಿಸಲು ಕಾರ್ಯಕರ್ತರು ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ’ ಎಂದು ಪಕ್ಷದ ನಾಯಕರು ಸೋಮವಾರ ತಿಳಿಸಿದ್ದಾರೆ.
ಮಧ್ಯಪ್ರದೇಶದ ಕಾಂಗ್ರೆಸ್ ಘಟಕದ ಅಧ್ಯಕ್ಷ ಜಿತು ಪಟ್ವಾರಿ, ವಿರೋಧ ಪಕ್ಷದ ನಾಯಕ ಉಮಂಗ್ ಸಿಂಘಾರ್ ಮತ್ತು ಕೇಂದ್ರ ಮಾಜಿ ಸಚಿವ ಅರುಣ್ ಯಾದವ್ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವಿಡಿಯೊಗಳನ್ನು ಬಿಡುಗಡೆ ಮಾಡಿ, ರೈತರು ಮತ್ತು ಸಾರ್ವಜನಿಕರಿಗೆ ‘ಮಹಾ ಚೌಪಾಲ್’ನಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ರೈತರ ಕುತ್ತಿಗೆ ಮೇಲೆ ಕತ್ತಿ ಇಡುವ ಮೂಲಕ ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದರ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಸಮ್ಮೇಳನದ ಮೂಲಕ ರೈತರ ಹೋರಾಟವನ್ನು ಬಲಪಡಿಸಲಿದ್ದಾರೆ’ ಎಂದು ಪಟ್ವಾರಿ ಹೇಳಿದ್ದಾರೆ.
‘ಭಾರತ– ಅಮೆರಿಕ ವ್ಯಾಪಾರ ಒಪ್ಪಂದದ ನಂತರ ಹತ್ತಿ, ಸೋಯಾಬೀನ್, ಮೆಕ್ಕೆಜೋಳ ಮತ್ತು ಸಾಸಿವೆ ಮುಂತಾದ ಬೆಳೆಗಳ ಬೆಲೆಗಳು ಕುಸಿಯುತ್ತಿವೆ’ ಎಂದು ಸಿಂಘಾರ್ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.