ಚಂಡೀಗಢ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಫೆಬ್ರುವರಿ 13ಕ್ಕೆ ‘ದೆಹಲಿ ಚಲೊ’ಗೆ ಕರೆ ನೀಡಿದ್ದು, ರ‍್ಯಾಲಿ ತಡೆಯಲು ಹರಿಯಾಣ ಅಧಿಕಾರಿಗಳು ಪಂಜಾಬ್‌ನ ಅಂಬಾಲಾ ಸಮೀಪದ ಶಂಭು ಬಳಿ ಗಡಿಯನ್ನು ಮುಚ್ಚಿದ್ದಾರೆ. ಜೊತೆಗೆ, ಫತೇಹಾಬಾದ್ ಮತ್ತು ಜಿಂದ್ ಜಿಲ್ಲೆಗಳ ಗಡಿಗಳಲ್ಲಿ ಭಾರಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಹರಿಯಾಣ ಸರ್ಕಾರವು, ಫೆ.11ರಿಂದ ಎರಡು ದಿನ ಅಂಬಾಲಾ, ಕುರುಕ್ಷೇತ್ರ, ಜಿಂದ್, ಹಿಸಾರ್, ಫತೇಹಾಬಾದ್ ಮತ್ತು ಸಿರ್ಸಾ ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸ್ಥಗಿತ ಮಾಡಿದೆ.
ಶಂಭು ಗಡಿಯ ಸಮೀಪದ ಘಗ್ಗರ್ ಮೇಲ್ಸೇತುವೆಗೆ ಅಡ್ಡಲಾಗಿ ಬ್ಯಾರಿಕೇಡ್, ಮುಳ್ಳುತಂತಿಗಳನ್ನು ಹಾಕಲಾಗಿದೆ.
‘ಜಿಂದ್‌ನಲ್ಲಿ ಹರಿಯಾಣ–ಪಂಜಾಬ್ ಗಡಿ ಸಮೀಪದ ಎರಡು ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಇನ್ನೂ ಎರಡು ರಸ್ತೆಗಳಿಗೆ ನಿರ್ಬಂಧ ಹಾಕಲಾಗುತ್ತದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದರು.
ಫತೇಹಾಬಾದ್ ಜಿಲ್ಲೆಯಲ್ಲಿಯೂ ರೈತರು ದೆಹಲಿಗೆ ತೆರಳುವುದನ್ನು ತಡೆಯಲು ಬ್ಯಾರಿಕೇಡ್ ಮತ್ತು ಮುಳ್ಳು ತಂತಿಗಳನ್ನು ರಸ್ತೆಗೆ ಅಡ್ಡಲಾಗಿ ಹಾಕಲಾಗಿದೆ.
ಈ ಮಧ್ಯೆ ಬೇಡಿಕೆಗಳ ಕುರಿತು ಮತ್ತೊಮ್ಮೆ ಮಾತುಕತೆ ನಡೆಸಲು ಫೆ.12ರಂದು ಕೇಂದ್ರ ಸರ್ಕಾರ ರೈತ ನಾಯಕರನ್ನು ಆಹ್ವಾನಿಸಿದೆ.
ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಮಂಗಳವಾರ (ಫೆ.13) ‘ದೆಹಲಿ ಚಲೊ’ಗೆ ಕರೆ ನೀಡಿವೆ. ಸುಮಾರು 200 ರೈತ ಸಂಘಟನೆಗಳು ಇದಕ್ಕೆ ಬೆಂಬಲ ನೀಡುತ್ತಿವೆ.
ಮಾತುಕತೆಗೆ ನಾವು ಸಿದ್ಧ. ಆದರೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಒಂದು ಕಡೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಯುತ್ತಿದೆ ಇನ್ನೊಂದೆಡೆ ರಾಜ್ಯ ಸರ್ಕಾರವು ಹೋರಾಟವನ್ನು ಹತ್ತಿಕ್ಕಲು ಯತ್ನಿಸುತ್ತಿದೆಜಗಜೀತ್ ಸಿಂಗ್ ಡಲ್ಲೇವಾಲ್ ಸಂಯುಕ್ತ ಕಿಸಾನ್ ಮೋರ್ಚಾ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.