ADVERTISEMENT

ಹರಿಯಾಣದಲ್ಲಿ ರೈತರ ಮೇಲೆ ಲಾಠಿಚಾರ್ಜ್: ರಸ್ತೆ ತಡೆದು ಪಂಜಾಬ್ ರೈತರಿಂದ ಪ್ರತಿಭಟನೆ

ಪಿಟಿಐ
Published 29 ಆಗಸ್ಟ್ 2021, 15:49 IST
Last Updated 29 ಆಗಸ್ಟ್ 2021, 15:49 IST
ಹರಿಯಾಣದಲ್ಲಿ ರೈತರ ಮೇಲಿನ ಲಾಠಿಚಾರ್ಜ್ ಖಂಡಿಸಿ ಪಂಜಾಬ್ ರೈತರು ಪ್ರತಿಭಟನೆ ನಡೆಸಿದರು. ಚಿತ್ರ-ಪಿಟಿಐ
ಹರಿಯಾಣದಲ್ಲಿ ರೈತರ ಮೇಲಿನ ಲಾಠಿಚಾರ್ಜ್ ಖಂಡಿಸಿ ಪಂಜಾಬ್ ರೈತರು ಪ್ರತಿಭಟನೆ ನಡೆಸಿದರು. ಚಿತ್ರ-ಪಿಟಿಐ   

ಚಂಡೀಗಡ: ಹರಿಯಾಣದಲ್ಲಿ ರೈತರ ಮೇಲೆ ಲಾಠಿ ಚಾರ್ಜ್ ಮಾಡಿದ್ದನ್ನು ಖಂಡಿಸಿ ಪಂಜಾಬ್ ರೈತರು ಎರಡು ಗಂಟೆಗಳ ಕಾಲ ರಸ್ತೆ ಮತ್ತು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ವಿವಿಧ ರೈತ ಸಂಘಟನೆಗಳಿಗೆ ಸೇರಿದ ಪ್ರತಿಭಟನಾಕಾರರು ಕರ್ನಾಲ್‌ನಲ್ಲಿ ರೈತರ ಮೇಲೆ 'ಬಲ' ಪ್ರಯೋಗಿಸಿದ್ದಕ್ಕಾಗಿ ಹರಿಯಾಣದ ಬಿಜೆಪಿ ನೇತೃತ್ವದ ಸರ್ಕಾರದ ಪ್ರತಿಕೃತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ವಿರುದ್ಧ ಪ್ರತಿಭಟಿಸಲು ಕರ್ನಾಲ್ ಕಡೆಗೆ ತೆರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿದ ರೈತರ ಗುಂಪಿನ ಮೇಲೆ ಪೊಲೀಸರು ಶನಿವಾರ ಲಾಠಿ ಚಾರ್ಜ್ ಮಾಡಿದ್ದರು. ಈ ವೇಳೆ ಸುಮಾರು 10 ಜನರು ಗಾಯಗೊಂಡಿದ್ದರು.

ADVERTISEMENT

ಪಂಜಾಬ್‌ನಲ್ಲಿ ಮಧ್ಯಾಹ್ನ 12 ಗಂಟೆಗೆ ಆರಂಭವಾದ ಎರಡು ಗಂಟೆಗಳ ಸುದೀರ್ಘ ಪ್ರತಿಭಟನೆಯು ಪ್ರಯಾಣಿಕರಿಗೆ ತೊಂದರೆ ಉಂಟುಮಾಡಿತು, ಹಲವಾರು ಕಡೆಗಳಲ್ಲಿ ಟ್ರಾಫಿಕ್ ಕಿರಿಕಿರಿಯಲ್ಲಿ ಸಿಲುಕುವಂತಾಯಿತು.

ಪ್ರತಿಭಟನೆಯಿಂದಾಗಿ ಜಲಂಧರ್-ಪಠಾಣ್‌ ಕೋಟ್ ಹೆದ್ದಾರಿ, ಲೂಧಿಯಾನ-ಚಂಡೀಗಡ ಹೆದ್ದಾರಿ, ಅಮೃತಸರ-ಗಂಗಾನಗರ ಹೆದ್ದಾರಿ ಮತ್ತು ಫಿರೋಜ್‌ಪುರ- ಜಿರಾ ರಸ್ತೆ ಸೇರಿದಂತೆ ಅನೇಕ ಕಡೆಗಳಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಯಿತು.

ಕಿಸಾನ್ ಸಂಘರ್ಷ ಮಜ್ದೂರ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ವಾನ್ ಸಿಂಗ್ ಪಂಧರ್, ಹರಿಯಾಣ ಪೊಲೀಸರು ರೈತರ ಮೇಲೆ ಲಾಠಿ ಚಾರ್ಜ್ ಮಾಡಿದ್ದನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಮೃತಸರದಲ್ಲಿ ನಡೆದ ಪ್ರತಿಭಟನೆಯ ವೇಳೆ ಮಾತನಾಡಿದ ಅವರು, ರೈತರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿರುವುದರಿಂದಾಗಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಭಾರತೀಯ ಕಿಸಾನ್ ಯೂನಿಯನ್ (ಏಕತಾ ಉಗ್ರಾಣ) ರಾಜ್ಯದ 56 ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿ ಖಟ್ಟರ್ ಸರ್ಕಾರದ 'ನಾಚಿಕೆಗೇಡಿನ' ಕೃತ್ಯವನ್ನು ಖಂಡಿಸಿತು.

ಇದೇ ವೇಳೆ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಕೂಡ ರೈತರ ಮೇಲಿನ ಹರಿಯಾಣ ಪೊಲೀಸರ ನಡೆಯನ್ನು ಖಂಡಿಸಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಶನಿವಾರ ಹರಿಯಾಣ ಪೊಲೀಸರ 'ಕ್ರೌರ್ಯಕ್ಕೆ' ಆಘಾತ ವ್ಯಕ್ತಪಡಿಸಿದ್ದಾರೆ ಮತ್ತು ಲಾಠಿಚಾರ್ಜ್‌ನಲ್ಲಿ ಗಾಯಗೊಂಡ ಅನೇಕರು 'ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರು. ಅಂತಹ ರೈತರ ಮೇಲೆ ಇಂತಹ ಕೆಟ್ಟ ದಾಳಿಯನ್ನು ಎಸಗಿದ್ದಾರೆ' ಎಂದು ಖಟ್ಟರ್ ವಿರುದ್ಧ ವಾಗ್ದಾಳಿ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.