ADVERTISEMENT

ರೈತರ ಪ್ರತಿಭಟನೆ: ಸರ್ಕಾರ ರೈತರ ಸಮಸ್ಯೆಗಳ ಬಗ್ಗೆ ಸೂಕ್ಷ್ಮವಾಗಿದೆ– ಪಿಯೂಷ್ ಗೋಯಲ್

ಪಿಟಿಐ
Published 7 ಫೆಬ್ರುವರಿ 2021, 16:57 IST
Last Updated 7 ಫೆಬ್ರುವರಿ 2021, 16:57 IST
ಕೇಂದ್ರ ಸಚಿವ ಪಿಯೂಷ್ ಗೋಯಲ್
ಕೇಂದ್ರ ಸಚಿವ ಪಿಯೂಷ್ ಗೋಯಲ್   

ನವದೆಹಲಿ: ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಮಾತುಕತೆ ಪುನರಾರಂಭಿಸಲು ಸರ್ಕಾರ ಸಿದ್ಧವಾಗಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಭಾನುವಾರ ಹೇಳಿದ್ದಾರೆ. ಆದರೆ ಪದೇ ಪದೇ ಪ್ರಸ್ತಾಪಗಳನ್ನಿಟ್ಟಿದ್ದರೂ ಪ್ರತಿಭಟನಾಕಾರರು ಈವರೆಗೆ ಯಾವುದೇ 'ದೃಢವಾದ ನಿರ್ಧಾರವನ್ನು' ಕೈಗೊಂಡಿಲ್ಲ ಎಂದು ಪ್ರತಿಪಾದಿಸಿದರು.

ರೈತ ಸಂಘಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಮನವಿಯನ್ನು ಪುನರುಚ್ಚರಿಸುತ್ತಾ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸರ್ಕಾರವು ರೈತರ ಸಮಸ್ಯೆಗಳ ಬಗ್ಗೆ ಸೂಕ್ಷ್ಮವಾಗಿದೆ. ಪ್ರಧಾನಿ ಮತ್ತು ಸರ್ಕಾರ ಅವರೊಂದಿಗೆ ಚರ್ಚಿಸಲು ಸಿದ್ಧವಾಗಿದೆ. ರೈತರಿಂದ ಈಗ ಎದ್ದಿರುವ ಯಾವುದೇ ವಿಷಯಗಳ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧವಿದೆ. ಅದರಿಂದ ಒಂದು ಕರೆಯಷ್ಟು ದೂರದಲ್ಲಿದೆ. ಆದರೆ ಅದಕ್ಕಾಗಿ ಯಾರಾದರೂಒಂದು ಕರೆಯನ್ನಾದರೂ ಮಾಡಿದರೆ ನಾವು ಮುಂದುವರಿಯಬಹುದು ಎಂದಿದ್ದಾರೆ.

ಕೆಲವು ವಿಷಯಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆ ಮತ್ತು ಅವರನ್ನು ಗೊಂದಲಕ್ಕೆ ದೂಡುವಲ್ಲಿ ಕೆಲವರು ಯಶಸ್ವಿಯಾಗಿದ್ದಾರೆ ಎಂದು ಹೇಳಿದ ಅವರು, ಪದಗಳ ಬದಲಾವಣೆಯ ಮೂಲಕ ಕಾನೂನುಗಳನ್ನು ಕಠಿಣಗೊಳಿಸಲು ನಾವು ಪ್ರಸ್ತಾಪಿಸಿದ್ದೇವೆ, 18 ತಿಂಗಳುಗಳವರೆಗೆ ಕಾನೂನುಗಳನ್ನು ಅಮಾನತುಗೊಳಿಸಲು ಪ್ರಸ್ತಾಪಿಸಿದ್ದೇವೆ. 'ತಾರೀಖ್ ಪರ್ ತಾರೀಖ್' (ದಿನಾಂಕದ ನಂತರ ದಿನಾಂಕ) ಎಂದು ಸುದ್ದಿಗಳಲ್ಲಿ ಓದುತ್ತಲೇ ಇರುತ್ತೇವೆ ಆದರೆ ಅದು 'ಪ್ರಸ್ತವ್ ಪರ್ ಪ್ರಸ್ತವ್' (ಪ್ರಸ್ತಾವದ ನಂತರ ಪ್ರಸ್ತಾವ) ಆಗಿರಬೇಕು. ಆದರೆ ರೈತರಿಂದ ದೃಢವಾದ ಸಲಹೆಯನ್ನು ನಾವು ಇನ್ನೂ ಕೇಳಬೇಕಾಗಿದೆ' ಎಂದು ರೈಲ್ವೆ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿರುವ ಗೋಯಲ್ ಹೇಳಿದರು.

ರೈತ ಮುಖಂಡರೊಂದಿಗೆ ಸರ್ಕಾರ 11 ಸುತ್ತಿನ ಮಾತುಕತೆ ನಡೆಸಿದ್ದು, ಕೊನೆಯದಾಗಿ ಜನವರಿ 22ರಂದು ನಡೆದಿತ್ತು. ಅದು ವಿಫಲವಾಗಿತ್ತು. ಬಳಿಕ ಜನವರಿ 26ರಂದು ರೈತರು ನಡೆಸಿದ ಟ್ರ್ಯಾಕ್ಟರ್ ಪೆರೇಡ್‌‌ನಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಹಿಂಸಾತ್ಮಕ ಘರ್ಷಣೆಗೆ ಕಾರಣವಾಗಿತ್ತು.

ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ಪೆರೇಡ್ ಸಂದರ್ಭದಲ್ಲಿ ಕೆಂಪು ಕೋಟೆಯಲ್ಲಿ ಧಾರ್ಮಿಕ ಧ್ವಜವನ್ನು ಹಾರಿಸಿದ್ದು 'ದುರದೃಷ್ಟಕರ' ಎಂದು ಸಚಿವರು ಖಂಡಿಸಿದರು, ಆದರೆ ಸರ್ಕಾರವು ಅದನ್ನು ದಾಟಿ ಮಾತುಕತೆಯ ಮೂಲಕ ಪರಿಹಾರವನ್ನು ಕಂಡುಕೊಳ್ಳಲು ಸಿದ್ಧವಾಗಿದೆ. ಸರ್ಕಾರವು ಮಸೂದೆಯನ್ನು ಜಾರಿಗೆ ತಂದಿದ್ದು ಜನರ ಹಿತಕ್ಕಾಗಿ ಮತ್ತು ಅದರಿಂದ ಯಾರಿಗಾದರೂ ಸಮಸ್ಯೆಗಳಿದ್ದರೆ ಅದನ್ನು ಇತರರಿಂದ ಕಸಿದುಕೊಳ್ಳುವ ಬದಲು ನಮ್ಮ ಗಮನಕ್ಕೆ ತರಬೇಕು ಎಂದು ಅವರು ಹೇಳಿದರು.

ಭಾರತದಲ್ಲಿ ಕೋಟ್ಯಂತರ ರೈತರು ಇದ್ದಾರೆ, ಈ ಕಾನೂನುಗಳು ಅವರಿಗೆ, ವಿಶೇಷವಾಗಿ ಸಣ್ಣ ರೈತರಿಗೆ ಪ್ರಯೋಜನವನ್ನು ನೀಡುತ್ತವೆ. ಅವರ ಆದಾಯವನ್ನು ಹೇಗೆ ಸುಧಾರಿಸುವುದು ಎಂದು ನಾವು ನೋಡಿದ್ದೇವೆ. ಇವುಗಳು ರೈತನಿಗೆ ಮಾತ್ರ ಪ್ರಯೋಜನವನ್ನು ನೀಡುತ್ತವೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ, ನಿಮಗೆ ಸಮಸ್ಯೆಗಳಿದ್ದರೆ ನಾವು ಚರ್ಚಿಸಬಹುದು' ಎಂದು ಸಚಿವರು ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.