ADVERTISEMENT

ದೆಹಲಿ: ರೈತರ ಪ್ರತಿಭಟನೆ ಇನ್ನಷ್ಟು ಚುರುಕು

ಡಬ್ಲ್ಯೂಟಿಒ ಒಪ್ಪಂದದಿಂದ ಕೃಷಿ ವಲಯ ಕೈಬಿಡಲು ಆಗ್ರಹ * ಶಂಭು ಗಡಿಯಲ್ಲಿ ಧರಣಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2024, 15:57 IST
Last Updated 26 ಫೆಬ್ರುವರಿ 2024, 15:57 IST
‘ದೆಹಲಿ ಚಲೋ’ ಪ್ರತಿಭಟನೆಯ ಭಾಗವಾಗಿ ರೈತರು ಸೋಮವಾರ ಪಂಜಾಬ್‌ –ಹರಿಯಾಣ ನಡುವಿನ ಶಂಭು ಗಡಿಯಲ್ಲಿ ಧರಣಿ ನಡೆಸಿದ್ದು, ಕಾರ್ಪೊರೇಟ್‌ ಕಂಪನಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. –ಪಿಟಿಐ ಚಿತ್ರ
‘ದೆಹಲಿ ಚಲೋ’ ಪ್ರತಿಭಟನೆಯ ಭಾಗವಾಗಿ ರೈತರು ಸೋಮವಾರ ಪಂಜಾಬ್‌ –ಹರಿಯಾಣ ನಡುವಿನ ಶಂಭು ಗಡಿಯಲ್ಲಿ ಧರಣಿ ನಡೆಸಿದ್ದು, ಕಾರ್ಪೊರೇಟ್‌ ಕಂಪನಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. –ಪಿಟಿಐ ಚಿತ್ರ   

ನವದೆಹಲಿ: ಕೃಷಿ ವಲಯವನ್ನು ವಿಶ್ವ ವಾಣಿಜ್ಯ ಸಂಘಟನೆ (ಡಬ್ಲ್ಯೂಟಿಒ) ಒಪ್ಪಂದದಿಂದ ಕೈಬಿಡಬೇಕು ಎಂದು ಆಗ್ರಹಿಸಿ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ರೈತರು ಮತ್ತೆ ಬೀದಿಗಿಳಿದಿದ್ದು, ಬೇಡಿಕೆ ಈಡೇರಿಕೆಗೆ ಒತ್ತಡ ಹೇರಲು ಪ್ರಮುಖ ಹೆದ್ದಾರಿಗಳಲ್ಲಿ ಟ್ರ್ಯಾಕ್ಟರ್‌ಗಳನ್ನು ನಿಲುಗಡೆ ಮಾಡಿದ್ದರು.

2020–21ನೇ ಸಾಲಿಲ್ಲಿ ರೈತರ ಬೃಹತ್ ಪ್ರತಿಭಟನೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ), ಸೋಮವಾರ ಮಧ್ಯಾಹ್ನ 12 ರಿಂದ 3 ಗಂಟೆಯವರೆಗೂ ‘ಡಬ್ಲ್ಯೂಟಿಒ ತೊಲಗಿಸಿ’ ಪ್ರತಿಭಟನೆಗೆ ಕರೆ ನೀಡಿತ್ತು. 

ಈ ಅವಧಿಯಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳುದ್ದಕ್ಕೂ ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸಿ ಗಮನಸೆಳೆದವು. ಇದರಿಂದಾಗಿ  ಪ್ರಮುಖ ಹದ್ದಾರಿಗಳಲ್ಲಿ ವಾಹನಗಳ ಸಂಚಾರ ತೀವ್ರ ವ್ಯತ್ಯಯಗೊಳ್ಳುವ ಸಾಧ್ಯತೆಗಳಿವೆ.

ADVERTISEMENT

ಈ ಮಧ್ಯೆ, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಸಿಗುವಂತೆ ಕಾಯ್ದೆಯ ಖಾತರಿ ಒದಗಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಕುರಿತು ಗಮನಸೆಳೆಯಲು ಕೆಲ ರೈತರು ಉತ್ತರ ಪ್ರದೇಶದ ಯಮುನಾ ಎಕ್ಸ್‌ಪ್ರೆಸ್‌ ವೇನಲ್ಲಿ ಟ್ರ್ಯಾಕ್ಟರ್‌ ರ‍್ಯಾಲಿ ನಡೆಸಿದರು.


ಇನ್ನೊಂದೆಡೆ, ಇದೇ ಬೇಡಿಕೆಗಳ ಈಡೇರಿಕೆಗೆ ಆಗ್ರಹಪಡಿಸುತ್ತಿರುವ ರೈತರು ‘ದೆಹಲಿ ಚಲೋ’ ಪ್ರತಿಭಟನೆಯ ಭಾಗವಾಗಿ ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಪಂಜಾಬ್ ಮತ್ತು ಹರಿಯಾಣ ನಡುವಿನ ಖನೌರಿ ಮತ್ತು ಶಂಭು ಗಡಿ ಭಾಗದಲ್ಲಿ ಬೀಡುಬಿಟ್ಟಿದ್ದಾರೆ.

‘ದೆಹಲಿ ಚಲೋ’ ಪ್ರತಿಭಟನೆಗೆ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ), ಕಿಸಾನ್‌ ಮಜ್ದೂರ್ ಮೋರ್ಚಾ (ಕೆಎಂಎಂ) ಕರೆ ನೀಡಿವೆ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಸಿಗುವಂತ ಕಾನೂನು ಖಾತರಿ ನೀಡಬೇಕು ಎಂಬುದು ಈ ಎರಡೂ ಸಂಘಟನೆಗಳ ಪ್ರಮುಕ ಬೇಡಿಕೆಯಾಗಿದೆ.


ಪಂಜಾಬ್‌ನ ಪ್ರತಿಭಟನನಿರತ ರೈತರು ಹರಿಯಾಣದ ಗಡಿ ಭಾಗವಾದ ಶಂಭು ಮತ್ತು ಖನೌರಿಯಲ್ಲಿ ಫೆಬ್ರುವರಿ 13ರಿಂದಲೂ ಬೀಡುಬಿಟ್ಟಿದ್ದಾರೆ. ಫೆಬ್ರುವರಿ 29ರವರೆಗೂ ಈ ಗಡಿಗಳಲ್ಲಿಯೇ ಉಳಿಯಲು ರೈತರು ತೀರ್ಮಾನಿಸಿದ್ದಾರೆ.


ಪ್ರತಿಭಟನೆಯ ಮುಂದಿನ ನಡೆ ಕುರಿತಂತೆ ರೈತರ ಮುಖಂಡರು ಫೆ. 29ರಂದು ತೀರ್ಮಾನಿಸುವರು ಎಂದು ರೈತರ ಮುಖಂಡರಾದ ಸರ್ವಾನ್‌ ಸಿಂಗ್‌ ಪಾಂಧೇರ್‌ ಈ ಮೊದಲು ತಿಳಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.