ADVERTISEMENT

ರೈತರ ಹೋರಾಟ: ಫೆ.16ರವರೆಗೆ ಪಂಜಾಬ್‌ನ ಕೆಲ ಭಾಗಗಳಲ್ಲಿ ಇಂಟರ್‌ನೆಟ್ ಸೇವೆ ಸ್ಥಗಿತ

ಪಿಟಿಐ
Published 15 ಫೆಬ್ರುವರಿ 2024, 9:50 IST
Last Updated 15 ಫೆಬ್ರುವರಿ 2024, 9:50 IST
<div class="paragraphs"><p>ಭದ್ರತಾ ಸಿಬ್ಬಂದಿ </p><p></p></div>

ಭದ್ರತಾ ಸಿಬ್ಬಂದಿ

   

(ಚಿತ್ರ ಕೃಪೆ– ಪಿಟಿಐ)

ADVERTISEMENT

ಚಂಡೀಗಢ: ಗೃಹ ಸಚಿವಾಲಯದ ಆದೇಶದ ಮೇರೆಗೆ ಪಂಜಾಬ್‌ನ ಪಟಿಯಾಲ, ಸಂಗ್ರೂರ್ ಮತ್ತು ಫತೇಘರ್ ಸಾಹಿಬ್ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಫೆಬ್ರುವರಿ 16ರವರೆಗೆ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ರೈತರ ‘ದೆಹಲಿ ಚಲೋ’ ಮೆರವಣಿಗೆ ಹಿನ್ನೆಲೆಯಲ್ಲಿ ಈ ಆದೇಶ ಹೊರಬಿದ್ದಿದೆ.

ಸಚಿವಾಲಯದ ಆದೇಶದ ಪ್ರಕಾರ, ಪಟಿಯಾಲದ ಶತ್ರನಾ, ಸಮನಾ, ಘನೌರ್, ದೇವಿಗಢ ಮತ್ತು ಬಲ್ಭೇರಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ, ಖಾನೌರಿ, ಮೂನಾಕ್, ಲೆಹ್ರಾ, ಸುನಮ್, ಸಂಗ್ರೂರ್‌ನ ಚಾಜ್ಲಿ ಮತ್ತು ಫತೇಘರ್ ಸಾಹಿಬ್ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಈ ಮೇಲಿನ ಪ್ರದೇಶಗಳಲ್ಲಿ ಫೆಬ್ರುವರಿ 12ರ ಸಂಜೆ 6 ಗಂಟೆಯಿಂದ ಫೆಬ್ರುವರಿ 16ರ ರಾತ್ರಿ 12 ಗಂಟೆಗಳವರೆಗೆ ಇಂಟರ್ನೆಟ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು ಫೆ.12ರಂದು ಹೊರಡಿಸಲಾದ ಆದೇಶದಲ್ಲಿ ತಿಳಿಸಲಾಗಿದೆ.

ಹರಿಯಾಣ ಸರ್ಕಾರ ಈಗಾಗಲೇ ಅಂಬಾಲಾ, ಕುರುಕ್ಷೇತ್ರ, ಕೈತಾಲ್, ಜಿಂದ್, ಹಿಸಾರ್, ಫತೇಹಾಬಾದ್ ಮತ್ತು ಸಿರ್ಸಾ ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆ ಮತ್ತು ಎಸ್‌ಎಂಎಸ್‌ ಸೇವೆಯನ್ನು ಸ್ಥಗಿತಗೊಳಿಸಿದೆ.

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿಗೆ ಕಾನೂನು ಜಾರಿಗೊಳಿಸಬೇಕು ಎಂಬುದೂ ಸೇರಿದಂತೆ ಹಲವು ಬೇಡಿಕೆಗಳನ್ನು ರೈತರು ಸರ್ಕಾರದ ಮುಂದಿಟ್ಟಿದ್ದಾರೆ. ಫೆಬ್ರುವರಿ 13ರಂದು ಆರಂಭವಾಗಿರುವ 'ದೆಹಲಿ ಚಲೋ' ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ದೇಶದ ಸುಮಾರು 200ಕ್ಕೂ ಹೆಚ್ಚು ಸಂಘಟನೆಗಳ ಸಾವಿರಾರು ರೈತರು ದೆಹಲಿಯ ಗಡಿ ಪ್ರದೇಶಗಳಿಗೆ ಬಂದು ಸೇರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.