ADVERTISEMENT

ರೈತರ ಮೇಲೆರಗಿದ ‘ಸ್ಥಳೀಯರು’

ತೆರವು ಮಾಡಲು ದೊಣ್ಣೆ ಹಿಡಿದು ಬಂದ ಗುಂಪು

ಪಿಟಿಐ
Published 29 ಜನವರಿ 2021, 18:41 IST
Last Updated 29 ಜನವರಿ 2021, 18:41 IST
ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರತ್ತ ಗುಂಪೊಂದು ಶುಕ್ರವಾರ ಕಲ್ಲು ತೂರಾಟ ನಡೆಸಿತು –ಪಿಟಿಐ ಚಿತ್ರ
ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರತ್ತ ಗುಂಪೊಂದು ಶುಕ್ರವಾರ ಕಲ್ಲು ತೂರಾಟ ನಡೆಸಿತು –ಪಿಟಿಐ ಚಿತ್ರ   

ನವದೆಹಲಿ: ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು ಗಡಿಯಲ್ಲಿ ಶುಕ್ರವಾರ ಹಿಂಸಾಚಾರ ನಡೆದಿದೆ.

ಸ್ಥಳೀಯರು ಎಂದು ಹೇಳಿಕೊಂಡ ದೊಡ್ಡ ಗುಂಪು ಕೈಯಲ್ಲಿ ದೊಣ್ಣೆ ಮತ್ತಿತರ ಆಯುಧಗಳನ್ನು ಹಿಡಿದು ಪ್ರತಿಭಟನ
ಕಾರರನ್ನು ತೆರವು ಮಾಡುವುದಕ್ಕಾಗಿ ಪ್ರತಿಭಟನಾ ಸ್ಥಳಕ್ಕೆ ನುಗ್ಗಿತು. ರೈತರ ಮೇಲೆ ಕಲ್ಲೆಸೆದು, ಅವರ ಡೇರೆಗಳನ್ನು ಕಿತ್ತು ಹಾಕಿತು. ಪ್ರತಿಯಾಗಿ ರೈತರು ಕೂಡ ಈ ಗುಂಪಿನ ಮೇಲೆ ಕಲ್ಲೆಸೆದರು. ಪರಿಸ್ಥಿತಿ ವಿಕೋಪಕ್ಕೆ ಹೋದಾಗಪೊಲೀಸರು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಷೆಲ್‌ ಸಿಡಿಸಿದ್ದಾರೆ.

ದೆಹಲಿಯ ಅಲಿಪುರ ಪೊಲೀಸ್‌ ಠಾಣಾಧಿಕಾರಿ ಪ್ರದೀಪ್‌ ಪಲಿವಾಲ್‌ ಅವರು ಹಿಂಸಾಚಾರದಲ್ಲಿ ಗಾಯಗೊಂಡಿದ್ದಾರೆ. ವ್ಯಕ್ತಿಯೊಬ್ಬ ಅವರ ಮೇಲೆ ಖಡ್ಗ
ದಿಂದ ಹಲ್ಲೆ ನಡೆಸಿದ್ದಾನೆ. ಹಲ್ಲೆ ನಡೆಸಿದಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತರ ಕೆಲವರು ಕೂಡ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಗಣರಾಜ್ಯೋತ್ಸವ ದಿನ ನಡೆದ ಟ್ರ್ಯಾಕ್ಟರ್‌ ರ್‍ಯಾಲಿ ಸಂದರ್ಭದಲ್ಲಿ ಪ್ರತಿಭಟನಕಾರರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ. ಹಾಗಾಗಿ ಅವರನ್ನು ಸಿಂಘು ಗಡಿಯಿಂದ ತೆರವು ಮಾಡಬೇಕು ಎಂದು ಸಿಂಘು ಗಡಿಗೆ ನುಗ್ಗಿದ ಗುಂಪು ಹೇಳಿಕೊಂಡಿದೆ.

ಪ್ರತಿಭಟನೆಯ ಸ್ಥಳಕ್ಕೆ ಹೊರಗಿನಿಂದ ಯಾರೂ ಹೋಗದಂತೆ ತಡೆ ಹಾಕಲಾಗಿದೆ. ಹಾಗಿದ್ದರೂ ಗುಂಪು ಒಳಕ್ಕೆ ನುಗ್ಗಿದೆ. ಅವರು ಒಳನುಗ್ಗುವು ನ್ನು ತಡೆಯುವುದಕ್ಕಾಗಿ ರೈತರು ಕೂಡ ತಮ್ಮ ಡೇರೆಗಳಿಂದ ಹೊರಬಂದರು. ಆದರೆ, ರೈತರು ಹೊರಬಾರ
ದಂತೆಸ್ವಯಂಸೇವಕರು ತಡೆದರು. ಹೀಗಾಗಿ, ಸಂಘರ್ಷ ಇನ್ನಷ್ಟು ತೀವ್ರಗೊಳ್ಳುವುದು ತಪ್ಪಿತು.ಈ ಗುಂಪು ಪ್ರತಿಭಟನಾ ಸ್ಥಳಕ್ಕೆ ಬರಲು ಪೊಲೀಸರೇ ಅವಕಾಶ ಕೊಟ್ಟಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

‘ಅವರು ಸ್ಥಳೀಯರಲ್ಲ. ಬಾಡಿಗೆ ಗೂಂಡಾಗಳು. ನಮ್ಮತ್ತ ಕಲ್ಲು ಮತ್ತು ಪೆಟ್ರೋಲ್‌ ಬಾಂಬ್‌ಗಳನ್ನು ಎಸೆದರು. ನಮ್ಮ ಟ್ರಾಲಿಗಳನ್ನು ಸುಡಲು ಅವರು ಯತ್ನಿಸಿದರು. ನಾವು ಅವರನ್ನು ತಡೆಯುತ್ತೇವೆ ಮತ್ತು ಇಲ್ಲಿಂದ ಹೋಗುವುದಿಲ್ಲ’ ಎಂದು ಪ್ರತಿಭಟನಕಾರ ಹರ್‌ಕೀರತ್‌ ಮಾನ್‌ ಬೇನಿವಾಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.