ADVERTISEMENT

ದೆಹಲಿಯಲ್ಲಿ ರೈತರ ಪ್ರತಿಭಟನೆ; ಹಲವು ರಸ್ತೆಗಳು ಬಂದ್‌

ಸರ್ಕಾರ ಮತ್ತು ರೈತ ಮುಖಂಡರ ನಡುವೆ ಇಂದು ಏಳನೇ ಸುತ್ತಿನ ಮಾತುಕತೆ

ಪಿಟಿಐ
Published 4 ಜನವರಿ 2021, 5:32 IST
Last Updated 4 ಜನವರಿ 2021, 5:32 IST
ದೆಹಲಿಯ ಘಾಜಿಯಾಪುರ ಗಡಿಯ ಹೆದ್ದಾರಿಯಲ್ಲಿ ಪ್ರತಿಭಟನಾ ನಿರತ ರೈತರು ಟೆಂಟ್‌ಗಳನ್ನು ಹಾಕಿಕೊಂಡಿರುವ ದೃಶ್ಯ
ದೆಹಲಿಯ ಘಾಜಿಯಾಪುರ ಗಡಿಯ ಹೆದ್ದಾರಿಯಲ್ಲಿ ಪ್ರತಿಭಟನಾ ನಿರತ ರೈತರು ಟೆಂಟ್‌ಗಳನ್ನು ಹಾಕಿಕೊಂಡಿರುವ ದೃಶ್ಯ   

ನವದೆಹಲಿ: ತೀವ್ರ ಚಳಿ ಮತ್ತು ಮಳೆಯ ನಡುವೆಯೂ ದೆಹಲಿಯ ಗಡಿಭಾಗಗಳಲ್ಲಿ ರೈತರ ಪ್ರತಿಭಟನೆ ಮುಂದುವರಿದಿದ್ದು, ಸೋಮವಾರ ದೆಹಲಿಯಿಂದ ಘಾಜಿಯಾಬಾದ್‌ ಹಾಗೂ ನೋಯ್ಡಾ ಮೂಲಕ ಘಾಜಿಯಾಪುರ ಸಂಪರ್ಕಿಸುವ ರಸ್ತೆಗಳನ್ನು ಬಂದ್‌ ಮಾಡಿರುವುದಾಗಿ ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ದೆಹಲಿಯ ಸಿಂಘು, ಟಿಕ್ರಿ, ಧಂನ್ಸಾ ಗಡಿಭಾಗಗಳನ್ನು ಬಂದ್ ಮಾಡಲಾಗಿದೆ. ಪ್ರಯಾಣಿಕರು ದೆಹಲಿ ತಲುಪಲು ಆನಂದ್ ವಿಹಾರ್, ಡಿಎನ್‌ಡಿ, ಭೋಪ್ರಾ ಮತ್ತು ಲೋನಿ ಗಡಿಭಾಗದ ಮಾರ್ಗಗಳನ್ನು ಬಳಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ. ಈ ಕುರಿತು ದೆಹಲಿ ಸಂಚಾರಿ ಪೊಲೀಸ್ ವಿಭಾಗ ಸರಣಿ ಟ್ವೀಟ್‌ಗಳನ್ನು ಮಾಡಿದೆ.

ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದೇಶದ ವಿವಿಧ ಭಾಗಗಳ ರೈತರು ದೆಹಲಿಯ ಗಡಿಭಾಗಗಳಲ್ಲಿ ನಡೆಸುತ್ತಿರುವ ಪ್ರತಿಭಟನೆ 40ನೇ ದಿನಕ್ಕೆ ಕಾಲಿಟ್ಟಿದೆ. ತೀವ್ರ ಚಳಿಯಲ್ಲೇ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ, ಭಾನುವಾರ ಮಳೆ ಕೂಡ ಅಡ್ಡಿ ಮಾಡಿದೆ. ಆದರೂ ರೈತರು ಪ್ರತಿಭಟನಾ ಸ್ಥಳವನ್ನು ಬಿಟ್ಟು ಕದಲಿಲ್ಲ. ‘ಹವಾಮಾನ ನಮ್ಮ ಪ್ರತಿಭಟನೆಗೆ ಅಡ್ಡಿಯಾಗುವುದಿಲ್ಲ. ನಮ್ಮ ಉತ್ಸಾಹ ಕುಂದಿಲ್ಲ. ನಮ್ಮ ಬೇಡಿಕೆಗಳು ಈಡೇರುವವರೆಗೂ ಹೋರಾಟ ಮುಂದುವರಿಸುತ್ತೆವೆ‘ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

ADVERTISEMENT

ಸರ್ಕಾರ ಮತ್ತು ರೈತ ಸಂಘಟನೆಗಳು ನಡುವೆ ಆರು ಸುತ್ತಿನ ಮಾತುಕತೆಗಳು ನಡೆದಿದ್ದು, ಎರಡೂ ಕಡೆಯವರೂ ತಮ್ಮ ನಿರ್ಧಾರದಿಂದ ಹಿಂದೆ ಸರಿಯದ ಕಾರಣ, ಸಮಸ್ಯೆ ಕಗ್ಗಂಟಾಗಿಯೇ ಉಳಿದಿದೆ. ಇಂದು (ಸೋಮವಾರ) ಕೇಂದ್ರ ಸರ್ಕಾರ ಮತ್ತು ‍ಪ್ರತಿಭಟನಾ ರೈತ ಸಂಘಟನೆಗಳ ನಡುವೆ ಏಳನೇ ಸುತ್ತಿನ ಮಾತುಕತೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.