ADVERTISEMENT

ರೈತರ ಪ್ರತಿಭಟನೆ: ಬಿಕ್ಕಟ್ಟು ಶಮನಕ್ಕೆ ಸುಪ್ರೀಂ ಕೋರ್ಟ್‌ ಸಮಿತಿ

ತೆರೆದ ಮನಸ್ಸಿನಿಂದ ಮಾತುಕತೆಗೆ ಮುಂದಾಗಲು ಸಲಹೆ

ಪಿಟಿಐ
Published 16 ಡಿಸೆಂಬರ್ 2020, 19:31 IST
Last Updated 16 ಡಿಸೆಂಬರ್ 2020, 19:31 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   
""

ನವದೆಹಲಿ: ಹೊಸ ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ರೈತರ ಮಧ್ಯೆ ಉಂಟಾಗಿರುವ ಬಿಕ್ಕಟ್ಟು ಶಮನಕ್ಕೆ ರಾಷ್ಟ್ರಮಟ್ಟದ ಸಮಿತಿಯೊಂದನ್ನು ರಚಿಸುವುದಾಗಿ ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ.

ಕೋರ್ಟ್‌ ಮಧ್ಯಪ್ರವೇಶ ಮಾಡಿ ಬಿಕ್ಕಟ್ಟು ಶಮನಗೊಳಿಸಬೇಕು, ರೈತರ ಪ್ರತಿಭಟನೆಯಿಂದಾಗಿ ಹೆದ್ದಾರಿ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದು, ಪ್ರತಿಭಟನೆಯನ್ನು ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ಹಲವರು ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ, ನ್ಯಾಯಮೂರ್ತಿಗಳಾದ ಎ.ಎಸ್‌. ಬೋಪಣ್ಣ ಹಾಗೂ ವಿ. ರಾಮಸುಬ್ರಮಣಿಯನ್‌ ಅವರ ಪೀಠವು, ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

‘ಪ್ರತಿಭಟನಾನಿರತ ರೈತರ ಜತೆಗಿನ ನಿಮ್ಮ ಮಾತುಕತೆಯು ಯಾವುದೇ ಫಲನೀಡಿದಂತೆ ಕಾಣುತ್ತಿಲ್ಲ. ಹೊಸ ಕಾಯ್ದೆಗಳು ತಮ್ಮ ವಿರುದ್ಧವಾಗಿವೆ ಎಂದು ರೈತರು ಭಾವಿಸಿದ್ದಾರೆ. ಸರ್ಕಾರ ತೆರೆದ ಮನಸ್ಸಿನಿಂದ ಮಾತುಕತೆ ನಡೆಸದಿದ್ದರೆ ಮುಂದಿನ ಬಾರಿಯೂ ಮಾತುಕತೆ ಯಶಸ್ವಿಯಾಗುವುದು ಅನುಮಾನ’ ಎಂದು ಕೋಟ್‌ ಹೇಳಿತು.

ADVERTISEMENT

‘ಬಿಕ್ಕಟ್ಟು ಶಮನಕ್ಕಾಗಿ ನಾವು ಒಂದು ಸಮಿತಿ ರಚಿಸುತ್ತೇವೆ. ಅದರಲ್ಲಿ ಸರ್ಕಾರ ಮತ್ತು ರೈತ ಸಂಘಟನೆಗಳ ಪ್ರತಿನಿಧಿಗಳು ಮತ್ತು ದೇಶದ ಇತರ ಭಾಗಗಳ ರೈತ ಸಂಘಟನೆಗಳ ಪ್ರತಿನಿಧಿಗಳೂ ಇರುತ್ತಾರೆ. ಸಮಿತಿಯಲ್ಲಿ ಇರಬೇಕಾದ ಸದಸ್ಯರ ಹೆಸರುಗಳನ್ನು ಪ್ರಸ್ತಾಪಿಸಿ’ ಎಂದು ಕೋರ್ಟ್‌ ಸರ್ಕಾರಕ್ಕೆ ಸೂಚಿಸಿತು. ಜತೆಗೆ ವಿವಿಧ ರೈತ ಸಂಘಟನೆಗಳಿಗೂ ನೋಟಿಸ್‌ ಜಾರಿ ಮಾಡಿತು. ಶುಕ್ರವಾರದಿಂದ ಕೋರ್ಟ್‌ಗಳಿಗೆ ರಜೆ ಇರುವುದರಿಂದ, ನೋಟಿಸ್‌ಗೆ ಗುರುವಾರವೇ ಉತ್ತರ ನೀಡಬೇಕೆಂದು ಸೂಚಿಸಲಾಗಿದೆ.

‘ರೈತ ಹೋರಾಟವು ರಾಷ್ಟ್ರೀಯ ಸಮಸ್ಯೆಯಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ. ಸರ್ಕಾರದಿಂದ ಇದನ್ನು ಪರಿಹರಿಸಲು
ಸಾಧ್ಯವಾಗುವಂತೆ ಕಾಣುತ್ತಿಲ್ಲ. ಆದ್ದರಿಂದ ಎಲ್ಲಾ ಕ್ಷೇತ್ರಗಳ ಪ್ರತಿನಿಧಿಗಳನ್ನೊಳಗೊಂಡ ಸಮಿತಿಯೊಂದನ್ನು ರಚಿಸುವುದು ಅಗತ್ಯ’ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿತು.

ರೈತರ ಹೋರಾಟವನ್ನು ಬೆಂಬಲಿಸಿ ಸಿಂಘು ಗಡಿಯಲ್ಲಿ ಮಾಜಿ ಸೈನಿಕರು ಬುಧವಾರ ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ

ಸಮಾನಾಂತರ ಮಾತುಕತೆ ನಿಲ್ಲಿಸಿ
‘ಪ್ರತಿಭಟನೆಯಲ್ಲಿ ನಿರತವಾಗಿರುವ ರೈತ ಸಂಘಟನೆಗಳನ್ನು ಬಿಟ್ಟು, ಇತರ ಸಂಘಟನೆಗಳ ಜತೆಗೆ ಸಮಾನಾಂತರ ಮಾತುಕತೆ ನಡೆಸುವುದನ್ನು ಮತ್ತು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರನ್ನು ಅಪಮಾನಿಸುವುದನ್ನು ನಿಲ್ಲಿಸಬೇಕು’ ಎಂದು ಪ್ರತಿಭಟನಾನಿರತ ರೈತ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ ಪತ್ರಮುಖೇನ ಒತ್ತಾಯಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.