ADVERTISEMENT

‘ದೆಹಲಿ ಚಲೋ’ | ಅಶ್ರುವಾಯು ಸಿಡಿಸಿದ ಪೊಲೀಸರು: ಹಲವು ರೈತರಿಗೆ

ಪಿಟಿಐ
Published 6 ಡಿಸೆಂಬರ್ 2024, 12:48 IST
Last Updated 6 ಡಿಸೆಂಬರ್ 2024, 12:48 IST
<div class="paragraphs"><p>ಪ್ರತಿಭಟನಾನಿರತ ರೈತರ ಮೇಲೆ ಅಶ್ರವಾಯು ಸಿಡಿಸಿದ ಭದ್ರತಾ ಸಿಬ್ಬಂದಿ</p></div>

ಪ್ರತಿಭಟನಾನಿರತ ರೈತರ ಮೇಲೆ ಅಶ್ರವಾಯು ಸಿಡಿಸಿದ ಭದ್ರತಾ ಸಿಬ್ಬಂದಿ

   

–ಪಿಟಿಐ ಚಿತ್ರ

‌ಶಂಭು: ಶಂಭು ಗಡಿಯಲ್ಲಿ ಕಳೆದ 10 ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ರೈತರಲ್ಲಿ 101 ರೈತರು ಶುಕ್ರವಾರ ಕಾಲ್ನಡಿಗೆಯಲ್ಲಿ ‘ದೆಹಲಿ ಚಲೋ’ ಹೊರಟಿದ್ದರು. ಅಶ್ರುವಾಯು ಸಿಡಿಸುವುದರ ಮೂಲಕ ಕಾಲ್ನಡಿಗೆ ಆರಂಭಿಸಿದ ಕೆಲವೇ ಅಡಿ ದೂರದಲ್ಲಿ ಪ್ರತಿಭಟನೆಯಲ್ಲಿ ನಿರತರಾಗಿದ್ದ ರೈತರನ್ನು ಹರಿಯಾಣ ಪೊಲೀಸರು ತಡೆದರು.

ADVERTISEMENT

ಹರಿಯಾಣದ ಅಂಬಾಲಾ ಜಿಲ್ಲೆಯಲ್ಲಿ ಅಲ್ಲಿನ ಜಿಲ್ಲಾಡಳಿತ ನಿಷೇಧಾಜ್ಞೆಯನ್ನು ಜಾರಿ ಮಾಡಿದೆ. ‘ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ನೀವು ಮುಂದುವರಿಯಬೇಡಿ’ ಎಂದು ಹರಿಯಾಣ ಪೊಲೀಸರು ರೈತರಿಗೆ ಹೇಳಿದರು.

ರೈತರನ್ನು ತಡೆಯಲು ಬ್ಯಾರಿಕೇಡ್‌ಗಳನ್ನು, ಕಬ್ಬಿಣದ ಮೆಶ್‌ಗಳನ್ನು ಅಳವಡಿಸಲಾಗಿತ್ತು. ರೈತ ಸಂಘಟನೆಗಳ ಧ್ವಜಗಳನ್ನು ಹಿಡಿದು ಬಂದಿದ್ದ ರೈತರು ಈ ಬ್ಯಾರಿಕೇಡ್‌ ಹಾಗೂ ಮೆಶ್‌ಗಳನ್ನು ದಾಟಿ ಮುಂದೆ ನಡೆದರು.

ಸ್ವಲ್ಪ ದೂರ ಸಾಗಿದ ಬಳಿಕ ರಾಷ್ಟ್ರೀಯ ಹೆದ್ದಾರಿ–44ರಲ್ಲಿ ಪೊಲೀಸರು ರೈತರನ್ನು ತಡೆದರು. ಇಲ್ಲಿ ಭಾರಿ ಸಂಖ್ಯೆಯಲ್ಲಿ ಬ್ಯಾರಿಕೇಡ್‌ ಹಾಗೂ ಕಬ್ಬಿಣದ ಮೆಶ್‌ಗಳನ್ನು, ಮುಳ್ಳಿನ ಬೇಲಿಯನ್ನು ಅಳವಡಿಸಲಾಗಿತ್ತು. ಸಿಮೆಂಟಿನ ಬ್ಯಾರಿಕೇಡ್‌ಗಳ ಹಿಂದೆ ನಿಂತಿದ್ದ ಭದ್ರತಾ ಸಿಬ್ಬಂದಿ ಕೈಯಲ್ಲಿ ಗುರಾಣಿಗಳನ್ನು ಹಿಡಿದುಕೊಂಡಿದ್ದರು. ‘ಇಲ್ಲಿಂದ ಮುಂದೆ ಹೋಗಲು ನಿಮಗೆ ಅನುಮತಿ ಇಲ್ಲ. ಇಲ್ಲಿಯೇ ನಿಲ್ಲಿ’ ಎಂದು ಪೊಲೀಸರು ಎಚ್ಚರಿಕೆ ನೀಡಿದರು.

ರೈತರಿಗೆ ಗಾಯ:

ಅಶ್ರುವಾಯು ಸಿಡಿಸಿದ ಕಾರಣ ಐದಾರು ರೈತರಿಗೆ ಗಾಯಗಳಾಗಿವೆ ಎಂದು ರೈತ ನಾಯಕರು ದೂರಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಲ್ನಡಿಯನ್ನು ಮುಂದುವರಿಸದಂತೆ ನಾಯಕರು ಕರೆ ನೀಡಿದ್ದಾರೆ. ಸಭೆಯ ಬಳಿಕ ಮುಂದಿನ ಕಾರ್ಯತಂತ್ರದ ಕುರಿತು ನಿರ್ಧರಿಸುವುದಾಗಿ ನಾಯಕರು ಹೇಳಿದ್ದಾರೆ.

ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಖಾತರಿ ನೀಡಬೇಕು ಎನ್ನುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಂಯುಕ್ತ ಕಿಸಾನ್‌ ಮೋರ್ಚಾ (ರಾಜಕೀಯೇತರ) ಹಾಗೂ ಕಿಸಾನ್‌ ಮಜ್ದೂರ್‌ ಮೋರ್ಚಾ ಸಂಘಟನೆಯ ನೂರಾರು ರೈತರು ಶಂಭು ಹಾಗೂ ಖನೌರಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. 

‘ತಮ್ಮ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸುತ್ತಿಲ್ಲ. ಆದ್ದರಿಂದ, ಮತ್ತೊಂದು ಸುತ್ತಿನ ಹೋರಾಟವನ್ನು ಆರಂಭಿಸುತ್ತೇವೆ. ಡಿ.6ರಿಂದ ಹಲವು ಗುಂಪುಗಳಲ್ಲಿ ಸಂಸತ್ತಿಗೆ ಕಾಲ್ನಡಿಗೆಯಲ್ಲಿ ತೆರಳಲಿದ್ದೇವೆ. ಡಿ.6ರಂದು ಮೊದಲ ಗುಂಪು ತೆರಳಿದೆ’ ಎಂದು ಕೆಲವು ದಿನಗಳ ಹಿಂದೆ ಸಂಯುಕ್ತ ಕಿಸಾನ್‌ ಮೋರ್ಚಾ ಘೋಷಿಸಿತ್ತು.

ಖನೌರಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಂಯುಕ್ತ ಕಿಸಾನ್‌ ಮೋರ್ಚಾದ ಜಗಜೀತ್‌ ಸಿಂಗ್‌ ಡಲ್ಲೇವಾಲ್‌ ಅವರು ತಮ್ಮ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಿದ್ದಾರೆ.

ಟ್ರ್ಯಾಕ್ಟರ್‌ಗಳನ್ನು ತರದಿದ್ದರೆ ನೀವು ದೆಹಲಿಗೆ ಹೋಗುವುದಕ್ಕೆ ನಮಗೆ ಅಭ್ಯಂತರವಿಲ್ಲ ಎಂದು ಬಿಜೆಪಿಯ ರಾಜ್ಯ ಹಾಗೂ ಕೇಂದ್ರ ನಾಯಕರು ಹೇಳುತ್ತಲೇ ಇದ್ದರು. ಈಗ ಕಾಲ್ನಡಿಯಲ್ಲಿ ಹೊರಟರೆ ನಮ್ಮನ್ನು ತಡೆಯಲು ಕಾರಣಗಳೇ ಇರಬಾರದಿತ್ತಲ್ಲವೇ?
ಸರವನ್‌ ಸಿಂಗ್‌ ಪಂಢೇರ್‌ ರೈತ ನಾಯಕ

ಎಂಎಸ್‌ಪಿ ಮೂಲಕವೇ ಖರೀದಿ: ಕೃಷಿ ಸಚಿವ

‘ರೈತರ ಎಲ್ಲ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮೂಲಕವೇ ಖರೀದಿಸಲಾಗುವುದು. ಇದು ಮೋದಿ ಸರ್ಕಾರ. ಮೋದಿ ಅವರ ಗ್ಯಾರಂಟಿಗಳನ್ನು ಪೂರೈಸಲಾಗುವುದು’ ಎಂದು ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ರಾಜ್ಯಸಭೆಯಲ್ಲಿ ಗುರುವಾರ ಉತ್ತರಿಸಿದರು.

ಕಾಂಗ್ರೆಸ್‌ ಸಂಸದ ಜೈರಾಮ್‌ ರಮೇಶ್‌ ಅವರು ಎಂಎಸ್‌ಪಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ‘ರೈತರ ಸೇವೆಯನ್ನು ಭಗವಂತನ ಸೇವೆ ಎಂದುಕೊಂಡವನು ನಾನು. ರೈತರು ರಕ್ತ ಸುರಿಸಿದರೂ ನೀವು (ಕಾಂಗ್ರೆಸ್‌) ಎಂಎಸ್‌ಪಿ ಮೂಲಕ ರೈತರ ಉತ್ಪನ್ನಗಳನ್ನು ಎಂದಿಗೂ ಖರೀದಿಸಿಲ್ಲ. ಆದರೆ ನಾವು ಖರೀದಿಸುತ್ತೇವೆ. ಜೊತೆಗೆ ಹೆಚ್ಚಿನ ಎಂಎಸ್‌ಪಿ ಅನ್ನೂ ನೀಡುತ್ತೇವೆ’ ಎಂದರು. 

‘ಕಾಂಗ್ರೆಸ್‌ನವರು ರೈತರನ್ನು ಎಂದಿಗೂ ಗೌರವಿಸಿಯೇ ಇಲ್ಲ. ಅವರು ಅಧಿಕಾರದಲ್ಲಿದ್ದಾಗ ಸ್ವಾಮಿನಾಥನ್‌ ವರದಿಯ ಶಿಫಾರಸುಗಳನ್ನು ಒಪ್ಪಿಕೊಂಡಿರಲಿಲ್ಲ. ಕೃಷಿಗೆ ತಗುಲುವ ವೆಚ್ಚಕ್ಕಿಂತ ಶೇ 50ರಷ್ಟು ಹೆಚ್ಚಿನ ಮೊತ್ತವನ್ನು ನೀಡಿ ಬೆಳೆಗಳನ್ನು ಖರೀದಿ ಮಾಡಲಂತೂ ಕಾಂಗ್ರೆಸ್‌ನವರು ಒಪ್ಪಿಕೊಂಡೇ ಇರಲಿಲ್ಲ. ಭತ್ತ ಗೋಧಿ ಜೋಳ ಮತ್ತು ಸೋಯಾಬೀನ್‌ ಅನ್ನು ಉತ್ಪಾದನಾ ವೆಚ್ಚಕ್ಕೆ ಶೇ 50ರಷ್ಟು ಹೆಚ್ಚುವರಿ ಎಂಎಸ್‌ಪಿ ನೀಡಿ ಕಳೆದ ಮೂರು ವರ್ಷಗಳಿಂದ ಮೋದಿ ಸರ್ಕಾರ ಖರೀದಿಸುತ್ತಿದೆ’ ಎಂದರು. 

ಆರ್‌ಜೆಡಿ ಸಂಸದ ಮನೋಜ್‌ ಕುಮಾರ್‌ ಝಾ ಅವರು ರೈತರ ಸಾಲ ಮನ್ನಾದ ಕುರಿತು ಎತ್ತಿದ ಪ್ರಶ್ನೆಗೆ ಉತ್ತರಿಸಿದ ಚೌಹಾಣ್‌ ‘ನಾವು ರೈತರ ಆದಾಯವನ್ನು ಹೆಚ್ಚು ಮಾಡುವುದರಲ್ಲಿ ನಂಬಿಕೆ ಇಟ್ಟವರು. ರೈತರ ಆದಾಯವನ್ನು ಹೆಚ್ಚಿಗೆ ಮಾಡುವುದಕ್ಕಾಗಿ ಈ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಲೇ ಇದೆ’ ಎಂದರು. ‘ಮೋದಿ ಅವರ ಸರ್ಕಾರವು ದೂರದೃಷ್ಟಿಯೊಂದಿಗೆ ಕೆಲಸ ಮಾಡುತ್ತದೆ. ನಾವು ಉತ್ಪಾದನೆಯನ್ನು ಹೆಚ್ಚಿಸುತ್ತೇವೆ ವೆಚ್ಚಗಳನ್ನು ಕಡಿತ ಮಾಡುತ್ತೇವೆ. ಬೆಳೆಗಳಿಗೆ ಉತ್ತಮ ಬೆಲೆ ನಿಗದಿ ಮಾಡುತ್ತೇವೆ. ನಷ್ಟದ ಸಂದರ್ಭದಲ್ಲಿ ಉತ್ತಮ ಪರಿಹಾರ ಮೊತ್ತ ನೀಡುತ್ತೇವೆ. ನೈಸರ್ಗಿಕ ಕೃಷಿ ಕಡೆಗೆ ಸಾಗುತ್ತೇವೆ. ರೈತರ ಆದಾಯವನ್ನು ಎಷ್ಟು ಹೆಚ್ಚು ಮಾಡುತ್ತೇವೆ ಎಂದರೆ ಸಾಲ ಮನ್ನಾ ಮಾಡಿ ಎಂದು ರೈತರು ಎಂದಿಗೂ ಕೇಳುವುದೇ ಇಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.