ADVERTISEMENT

ಖಾಸಗಿ ಉಗ್ರಾಣಗಳಲ್ಲಿ ಬೆಳೆ ದಾಸ್ತಾನು: ಏ. 7ಕ್ಕೆ ಪ್ರತಿಭಟನೆ

ಪಿಟಿಐ
Published 2 ಏಪ್ರಿಲ್ 2024, 15:13 IST
Last Updated 2 ಏಪ್ರಿಲ್ 2024, 15:13 IST
   

ಚಂಡೀಗಢ: ಪಂಜಾಬ್‌ನಲ್ಲಿ ಖಾಸಗಿ ಉಗ್ರಾಣಗಳಲ್ಲಿ ಗೋಧಿ ದಾಸ್ತಾನು ಮಾಡುವುದಾಗಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ವಿರೋಧಿಸಿ ರೈತಪರ ಸಂಘಟನೆಗಳು ಏಪ್ರಿಲ್ 7ರಂದು ಪ್ರತಿಭಟನೆ ಹಮ್ಮಿಕೊಳ್ಳಲಿವೆ.

ಪ್ರತಿಕೃತಿಗಳನ್ನು ದಹಿಸಿ ಕೇಂದ್ರ ಮತ್ತು ಪಂಜಾಬ್‌ ಸರ್ಕಾರಗಳ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಸಂಯುಕ್ತ ಕಿಸಾನ್‌ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್‌ ಮಜ್ದೂರ್‌ ಮೋರ್ಚಾ (ಕೆಎಂಎಂ) ತಿಳಿಸಿವೆ. ಇದೇ ವಿಚಾರಕ್ಕೆ ಸಂಬಂಧಿಸಿ ಏಪ್ರಿಲ್‌ 9ರಂದು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಸಂಯುಕ್ತ ಕಿಸಾನ್‌ ಮೋರ್ಚಾ (ಎಸ್‌ಕೆಎಂ) ಕೂಡ ಈ ಮೊದಲು ಘೋಷಿಸಿತ್ತು. 

ಮಾರ್ಚ್‌ 15ರಂದು ಪ್ರಕಟಣೆ ಹೊರಡಿಸಿದ್ದ ರಾಜ್ಯ ಸರ್ಕಾರವು, ಖಾಸಗಿ ಸಂಸ್ಥೆಗಳು ನಿರ್ವಹಿಸುತ್ತಿರುವ 11 ಉಗ್ರಾಣಗಳನ್ನು ರಾಬಿ ಬೆಳೆಗಳ ಖರೀದಿ ಕೇಂದ್ರಗಳನ್ನಾಗಿ ಮಾಡಲಾಗುವುದು ಎಂದು ಘೋಷಿಸಿತ್ತು.

ADVERTISEMENT

‘ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಪರವಾಗಿ ಈ ನಿರ್ಧಾರ ಕೈಗೊಂಡಿದೆ. ಮಂಡಿಗಳನ್ನು ನಿಷ್ಕ್ರಿಯಗೊಳಿಸುವ ಪ್ರಯತ್ನ ಇದಾಗಿದೆ’ ಎಂದು ಎಸ್‌ಕೆಎಂ (ರಾಜಕೀಯೇತರ) ನಾಯಕ ಜಗಜಿತ್‌ ಸಿಂಗ್‌ ಡಲ್ಲೇವಾಲ್‌ ಸುದ್ದಿಗಾರರ ಎದುರು ಹೇಳಿದ್ದಾರೆ.

ತಾವು ಬೆಳೆದಿರುವ ಬೆಳೆಗಳನ್ನು ಖಾಸಗಿ ಉಗ್ರಾಣಗಳಿಗೆ ತರದಂತೆ ಕೆಎಂಎಂ ನಾಯಕ ಸರ್ವಣ್‌ ಸಿಂಗ್‌ ಪಾಂಢೇರ್‌ ರೈತರನ್ನು ಒತ್ತಾಯಿಸಿದ್ದಾರೆ. 

ಸದ್ಯ ಕೇಂದ್ರ ಸರ್ಕಾರದ ವಿರುದ್ಧ ರೈತ ಸಂಘಟನೆಗಳು ನಡೆಸುತ್ತಿರುವ ಹೋರಾಟದಲ್ಲಿ ಬಂಧಿತರಾಗಿರುವ ಐವರು ರೈತರನ್ನು ಬಿಡುಗಡೆಗೊಳಿಸುವಂತೆಯೂ ರೈತ ಸಂಘಟನೆಗಳು ಒತ್ತಾಯಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.