ADVERTISEMENT

ರೈತರ ಪ್ರತಿಭಟನೆಯಲ್ಲಿ ಇದ್ದಿದ್ದು ಟ್ರ್ಯಾಕ್ಟರ್ ಮಾತ್ರವಲ್ಲ!

ಪಿಟಿಐ
Published 27 ಜನವರಿ 2021, 4:48 IST
Last Updated 27 ಜನವರಿ 2021, 4:48 IST
ಕೆಂಪುಕೋಟೆಗೆ ಮುತ್ತಿಗೆ ಹಾಕಿದ ಪ್ರತಿಭಟನಾ ನಿರತ ರೈತರು
ಕೆಂಪುಕೋಟೆಗೆ ಮುತ್ತಿಗೆ ಹಾಕಿದ ಪ್ರತಿಭಟನಾ ನಿರತ ರೈತರು   

ನವದೆಹಲಿ: ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಸಿ ಗಣರಾಜ್ಯೋತ್ಸವದ ದಿನದಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರೈತರು ನಡೆಸಿದ ಟ್ರ್ಯಾಕ್ಟರ್ ಪೆರೇಡ್ ಕೇವಲ ಟ್ರ್ಯಾಕ್ಟರ್‌ಗಷ್ಟೇ ಸೀಮಿತವಾಗಿರಲಿಲ್ಲ.

ಹಿಂಸಾಚಾರಕ್ಕೆ ತಿರುಗಿದ ಜಾಥಾದಲ್ಲಿ ರೈತರು, ಕುದುರೆಗಳು, ಇ-ರಿಕ್ಷಾ, ಆಟೋರಿಕ್ಷಾ, ಸೈಕಲ್, ಬೈಕ್, ಕಾರು, ಬಸ್, ಟ್ರಕ್, ಜೆಸಿಬಿ ಸೇರಿದಂತೆ ಅನೇಕ ವಾಹನಗಳಲ್ಲಿ ಪ್ರತಿಭಟಿಸಿದ್ದರು.

ಈ ಪೈಕಿ ಕೆಲವರು ಬಾಡಿಗೆ ವಾಹನಗಳನ್ನು ಬಳಕೆ ಮಾಡಿದ್ದರು. ಪಂಜಾಬ್‌ನ ಹೋಶಿಯಾರಪುರದ ತನ್ನ ಸ್ನೇಹಿತರೊಂದಿಗೆ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ನಿಹಾಲ್ ಸಿಂಗ್ ಅವರು ಒಂದು ದಿನದ ಮಟ್ಟಿಗೆ ಬಾಡಿಗೆ ವಾಹನವನ್ನು ಪಡೆದಿದ್ದರು ಎಂದು ತಿಳಿಸಿದ್ದಾರೆ.

ADVERTISEMENT

ಕಾಲ್ನಡಿಗೆ ಮೂಲಕ ನಾವು ಸಿಂಘುವಿಗೆ ಬಂದೆವು. ಅಲ್ಲದೆ ಮೆರವಣಿಗೆ ಮೂಲಕ ತೆರಳಲು ಬಯಸಿದ್ದೆವು. ಆದರೆ ದಣಿವಾಗಿದ್ದರಿಂದ ಆಟೋರಿಕ್ಷಾವನ್ನು ಬಾಡಿಗೆ ಪಡೆದುಕೊಂಡೆವು ಎಂದು 36ರ ಹರೆಯದ ನಿಹಾಲ್ ತಿಳಿಸಿದರು.

ಆಟೋ ರಿಕ್ಷಾದಲ್ಲಿ ನಾಲ್ಕು ಜನರ ಪ್ರಯಾಣಕ್ಕಾಗಿ 2,500 ರೂ. ಬಾಡಿಗೆ ಪಾವತಿಸಿದ್ದರು. ಆಹಾರ ಕೂಡಾ ಅವರ ಜೊತೆಗೆ ಹಂಚಿಕೊಂಡರು.

ಬ್ಯಾರಿಕೇಡ್‌ಗಳನ್ನು ತೆರವುಗೊಳಿಸುವುದಕ್ಕಾಗಿ ನಾನು ಜೆಸಿಬಿ‌ ತಂದಿದ್ದೇನೆ ಎಂದು ಪ್ರತಿಭಟನಾಕಾರ ಸುರ್ಜಿತ್ ಸಂಧು ತಿಳಿಸಿದ್ದಾರೆ.

ಇನ್ನು ಕೆಲವು ಮಂದಿ ಕುದುರೆ ಸವಾರಿ ಮಾಡಿದರು. ಕುದುರೆಯೇ ನಮ್ಮ ಟ್ರಾಕ್ಟರ್ ಎಂದು ನಿಹಾಂಗ್ ಸಿಖ್ ತಿಳಿಸುತ್ತಾರೆ. ಕೆಲವು ಯುವಕರು ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಸವಾರಿ ನಡೆಸಿದರು.

ಟ್ರಕ್‌ಗಳಲ್ಲಿಯೂ ತ್ರಿವರ್ಣ ಪತಾಕೆಯನ್ನು ಹಿಡಿಯುತ್ತಾ ಪ್ರವೇಶಿಸಿದ ರೈತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ತಮ್ಮ ಹೆತ್ತವರು, ಕುಟುಂಬ ಸದಸ್ಯರನ್ನು ಊರಿನಲ್ಲೇ ಬಿಟ್ಟು ಹಲವಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಲು ರಾಷ್ಟ್ರ ರಾಜಧಾನಿಯತ್ತ ಪ್ರಯಾಣ ಬೆಳೆಸಿದ್ದರು.

ಪಂಜಾಬ್‌ನ ಪ್ರತಿಭಟನಾಕಾರರು ಸಾಂಪ್ರದಾಯಿಕ ಶೈಲಿಯಲ್ಲಿ ಕತ್ತಿಗಳು, ಕಿರ್ಪಾನ್ (ಚಾಕು), ಖಡ್ಗ ಹಾಗೂ ಕೋಲುಗಳನ್ನು ಹಿಡಿದುಕೊಂಡು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಇನ್ನು ಕೆಲವರು ಇದರಲ್ಲಿ ಕಸರತ್ತನ್ನು ಪ್ರದರ್ಶಿಸಿದರು.

ಹಿಂಸಾಚಾರಕ್ಕೆ ತಿರುಗಿದ ರೈತರ ಒಂದು ಗುಂಪು, ಭದ್ರತೆಯಲ್ಲಿ ನಿರತರಾಗಿದ್ದ ಪೊಲೀಸರ ಮೇಲೆ ಆಕ್ರಮಣ ಮಾಡಿದ್ದರು. ಟ್ರ್ಯಾಕ್ಟರ್‌ಗಳನ್ನು ಅಡ್ಡಾದಿಡ್ಡಿಯಾಗಿ ಚಲಿಸಿ, ಭಯದ ವಾತಾವರಣ ನಿರ್ಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.