ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಜನವರಿ 26ರಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸಲು ರೈತರು ನಿರ್ಧರಿಸಿದ್ದಾರೆ. ಆ ಹಿನ್ನೆಲೆಯಲ್ಲಿ ರೈತ ಮುಖಂಡರು ಮತ್ತು ಪೊಲೀಸರ ನಡುವೆ ಎರಡನೇ ಸುತ್ತಿನ ಮಾತುಕತೆ ಗುರುವಾರ ನಡೆದಿದೆ.
ದೆಹಲಿಯ ಹೊರಗೆ ಟ್ರ್ಯಾಕ್ಟರ್ ರ್‍ಯಾಲಿ ನಡೆಸುವಂತೆ ಪೊಲೀಸರು ರೈತರಿಗೆ ಮನವಿ ಮಾಡಿಕೊಂಡಿದ್ದಾರೆ. ಆದರೆ, ರ್‍ಯಾಲಿ ನಡೆಸುವ ತೀರ್ಮಾನದಿಂದ ರೈತರು ಹಿಂದೆ ಸರಿದಿಲ್ಲ. ಆ ಕಾರಣ ಮಾತುಕತೆಯಲ್ಲಿ ಯಾವುದೇ ಸಕಾರಾತ್ಮಕ ಬೆಳವಣಿಗೆಗಳು ಕಂಡುಬಂದಿಲ್ಲ.
'ದೆಹಲಿಯ ಒಳಗೆ ಶಾಂತಿಯುತವಾಗಿ ಟ್ರ್ಯಾಕ್ಟರ್ ರ್‍ಯಾಲಿಯನ್ನು ನಡೆಸಲು ನಾವು ತೀರ್ಮಾನಿಸಿದ್ದೇವೆ. ದೆಹಲಿಯ ಹೊರಗೆ ರ್‍ಯಾಲಿ ನಡೆಸಬೇಕೆಂಬುದು ಪೊಲೀಸರ ಬಯಕೆಯಾಗಿದೆ. ಆದರೆ, ನಾವು ನಮ್ಮ ತೀರ್ಮಾನದಿಂದ ಹಿಂದೆ ಸರಿಯುವುದಿಲ್ಲ' ಎಂದು ಸ್ವರಾಜ್ ಅಭಿಯಾನದ ಮುಖಂಡ ಯೋಗೇಂದ್ರ ಯಾದವ್ ತಿಳಿಸಿದ್ದಾರೆ.
ದೆಹಲಿ ಪೊಲೀಸ್‌ನ ಉತ್ತರ ವಲಯದ ಜಂಟಿ ಪೊಲೀಸ್ ಆಯುಕ್ತ ಎಸ್.ಎಸ್. ಯಾದವ್ ಸಭೆ ನಡೆಸುವ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಹರಿಯಾಣ ಮತ್ತು ಉತ್ತರ ಪ್ರದೇಶ ಪೊಲೀಸ್ ಅಧಿಕಾರಿಗಳು ಸಹ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಟ್ರ್ಯಾಕ್ಟರ್ ರ್ಯಾಲಿ ನಡೆಸಲು ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಶಾಂತಿಯುತ ರ‍್ಯಾಲಿ ನಡೆಸಲು ಅಧಿಕಾರಿಗಳು ಸಹಕಾರ ನೀಡಬೇಕು. ರ‍್ಯಾಲಿ ನಿಲ್ಲಿಸುವ ಪ್ರಯತ್ನ ಮಾಡಬಾರದು ಎಂದು ರೈತ ಸಂಘಟನೆಗಳ ಮುಖಂಡರು ಕೋರಿದ್ದಾರೆ.
ದೆಹಲಿ ಗಡಿಯಲ್ಲಿ ಕಳೆದ 57 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಟ್ರ್ಯಾಕ್ಟರ್ ರ್ಯಾಲಿ ನಡೆಸಲು ಭರದಿಂದ ಸಿದ್ಧತೆಗಳನ್ನು ರೈತರು ಕೈಗೊಂಡಿದ್ದಾರೆ. ಇದಕ್ಕೆ ಮುನ್ನವೇ ಜನರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಪಂಜಾಬ್‌ನ ಹಳ್ಳಿಗಳಲ್ಲೂ ರ‍್ಯಾಲಿಗಳನ್ನು ಆಯೋಜಿಸಲಾಗುತ್ತಿದೆ.
ಟ್ರ್ಯಾಕ್ಟರ್ ರ‍್ಯಾಲಿಗೆ ತಡೆಯಾಜ್ಞೆ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆದಿದೆ.
ಕೃಷಿ ಕಾಯ್ದೆಗಳಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ಮತ್ತು ರೈತ ಮುಖಂಡರ ನಡುವೆ ಹತ್ತನೇ ಸುತ್ತಿನ ಮಾತುಕತೆ ಬುಧವಾರ ನಡೆದಿತ್ತು. ಮುಂದಿನ ಒಂದೂವರೆ ವರ್ಷಗಳ ಕಾಲ ಕೃಷಿ ಕಾನೂನುಗಳನ್ನು ಅಮಾನತಿನಲ್ಲಿಡುವ ಬಗ್ಗೆ ಕೇಂದ್ರ ಸರ್ಕಾರ ಪ್ರಸ್ತಾಪಿಸಿತ್ತು. 11ನೇ ಸುತ್ತಿನ ಮಾತುಕತೆಯನ್ನು ಜನವರಿ 22ರಂದು ಆಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.