
ಅರವಿಂದ ಕೇಜ್ರಿವಾಲ್
ನವದೆಹಲಿ: ದೆಹಲಿ ವಿಧಾನಸಭೆ ಸಂಕೀರ್ಣದ ‘ಫಾಸಿ ಘರ್’ (ಮರಣದಂಡನೆ ವಿಧಿಸುವ ಕೊಠಡಿ) ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಎಎಪಿಯ ಇತರ ಮುಖಂಡರ ವಿರುದ್ಧ ದೆಹಲಿ ವಿಧಾನಸಭೆಯ ಹಕ್ಕುಬಾಧ್ಯತಾ ಸಮಿತಿ ಕ್ರಮಕ್ಕೆ ಶಿಫಾರಸು ಮಾಡಿದೆ.
‘ಕೇಜ್ರಿವಾಲ್, ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಮಾಜಿ ಸ್ಪೀಕರ್ ರಾಮ್ ನಿವಾಸ್ ಗೋಯಲ್ ಮತ್ತು ಮಾಜಿ ಉಪ ಸಭಾಪತಿ ರಾಖಿ ಬಿರ್ಲಾ ಅವರು ‘ಉದ್ದೇಶಪೂರ್ವಕವಾಗಿ’ ಈ ಪ್ರಕರಣದ ವಿಚಾರಣೆಯಿಂದ ದೂರವಿರಲು ಬಯಸಿದ್ದಾರೆ’ ಎಂದು ಸಮಿತಿ ತನ್ನ ವರದಿಯಲ್ಲಿ ಹೇಳಿದೆ.
‘ಫಾಸಿ ಘರ್’ ಪ್ರಕರಣವು ದೆಹಲಿ ವಿಧಾನಸಭೆ ಕಟ್ಟಡದ ನವೀಕರಿಸಿದ ಕೊಠಡಿಯ ಕುರಿತು ಎಎಪಿ ಮತ್ತು ಬಿಜೆಪಿ ನಡುವಿನ ವಿವಾದವಾಗಿದೆ. 2022ರಲ್ಲಿ ಎಎಪಿ ಸರ್ಕಾರ ಇದ್ದಾಗ ಕೊಠಡಿಯನ್ನು ‘ಫಾಸಿ ಘರ್’ ಹೆಸರಿನಲ್ಲಿ ನವೀಕರಿಸಿ ಉದ್ಘಾಟಿಸಲಾಗಿತ್ತು. ಬ್ರಿಟಿಷರ ಕಾಲದಿಂದಲೂ ಈ ಕೊಠಡಿಯನ್ನು ‘ಉಪಹಾರ ಕೊಠಡಿ’ ಎಂದು ಕರೆಯಲಾಗುತ್ತಿದೆ ಎಂದು ಬಿಜೆಪಿ ಹೇಳಿಕೊಂಡಿದೆ.
ಬಿಜೆಪಿ ಅಧಿಕಾರಕ್ಕೆ ಬಂದ ನಂತರ, 2025ರ ಆಗಸ್ಟ್‌ನಲ್ಲಿ ವಿಧಾನಸಭಾಧ್ಯಕ್ಷ ವಿಜೇಂದರ್ ಗುಪ್ತಾ ಅವರು, ‘ಫಾಸಿ ಘರ್’ ವಿವಾದವನ್ನು ಬಗೆಹರಿಸುವ ಹೊಣೆಯನ್ನು ಸದನದ ಹಕ್ಕುಬಾಧ್ಯತಾ ಸಮಿತಿಗೆ ವಹಿಸಿ, ಪರಿಶೀಲನಾ ವರದಿ ಸಲ್ಲಿಸಲು ಸೂಚಿಸಿದ್ದರು.
2025ರ ಸೆಪ್ಟೆಂಬರ್ 9ರಂದು ಎಎಪಿಯ ನಾಲ್ವರು ನಾಯಕರಿಗೆ ನೋಟಿಸ್ ನೀಡಿದ್ದ ಸಮಿತಿ, ‘ಫಾಸಿ ಘರ್ ಅಸ್ತಿತ್ವವನ್ನು ದೃಢೀಕರಿಸುವ’ ಕುರಿತು ಲಿಖಿತ ಹೇಳಿಕೆ ನೀಡುವಂತೆ ಸೂಚಿಸಿತ್ತು. ಆದರೆ, ತಮ್ಮಿಂದ ಯಾವುದೇ ಶಿಷ್ಟಾಚಾರ ಉಲ್ಲಂಘನೆಯಾಗಿಲ್ಲ ಎಂದಿದ್ದ ಎಎಪಿ ನಾಯಕರು, ಸಮಿತಿಯ ಅಧಿಕಾರ ವ್ಯಾಪ್ತಿಯನ್ನೇ ಪ್ರಶ್ನಿಸಿದ್ದರು.
‘2025ರ ನವೆಂಬರ್ 13 ಮತ್ತು 20ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರೂ, ಎಎಪಿ ನಾಯಕರು ಗೈರಾಗಿದ್ದರು’ ಎಂದು ಸಮಿತಿಯು ತನ್ನ ವರದಿಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.