ADVERTISEMENT

ಎಫ್‌ಎಟಿ ಶಾಲೆಗಳ ಉಸ್ತುವಾರಿ: ಕಣಿವೆಯಲ್ಲಿ ಹೊಸ ಜಟಾಪಟಿ 

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 15:58 IST
Last Updated 23 ಆಗಸ್ಟ್ 2025, 15:58 IST
   

ಶ್ರೀನಗರ: ನಿಷೇಧಿತ ಜಮಾತ್–ಎ–ಇಸ್ಲಾಮಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದೆ ಎನ್ನಲಾಗಿರುವ ಫಲಾಹ್‌– ಎ– ಆಮ್‌ ಟ್ರಸ್ಟ್‌ (ಎಫ್‌ಎಟಿ) ಮುನ್ನಡೆಸುತ್ತಿರುವ 215 ಶಾಲೆಗಳ ಉಸ್ತುವಾರಿ ವಿಚಾರವು ಜಮ್ಮು ಕಾಶ್ಮೀರದಲ್ಲಿ ಹೊಸ ಜಟಾಪಟಿ ಹುಟ್ಟುಹಾಕಿದೆ.

ಎಫ್‌ಎಟಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆ ಶಾಲೆಗಳ ಉಸ್ತುವಾರಿಯನ್ನು ಸಂಬಂಧಿತ ಜಿಲ್ಲಾಧಿಕಾರಿಗಳು ವಹಿಸಿಕೊಂಡು, ಶೀಘ್ರವೇ ಶಾಲೆಗಳ ಮೇಲ್ವಿಚಾರಣೆಗೆ ಸಮಿತಿಗಳನ್ನು ರಚಿಸಬೇಕೆಂದು ಲೆಫ್ಟಿನೆಂಟ್‌ ಗವರ್ನರ್‌ ನೇತೃತ್ವದ ಶಾಲಾ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದೆ. ಆದರೆ, ಈ ಬಗ್ಗೆ ಶಿಕ್ಷಣ ಸಚಿವೆ ಸಕಿನಾ ಇಟೂ ತಕರಾರು ವ್ಯಕ್ತಪಡಿಸಿದ್ದಾರೆ.

‘ಎಫ್‌ಎಟಿ ಶಾಲೆಗಳ ಮೇಲ್ವಿಚಾರಣೆಯನ್ನು ಸ್ಥಳೀಯ ಸರ್ಕಾರಿ ಶಾಲೆಯ ಪ್ರಾಂಶುಪಾಲರಿಗೆ ವಹಿಸಬೇಕು ಎಂಬ ಪ್ರಸ್ತಾ‍ಪಕ್ಕೆ ನಾನು ಅನುಮತಿ ನೀಡಿದ್ದೆ. ಆದರೆ, ಜಿಲ್ಲಾಧಿಕಾರಿಗಳ ವ್ಯಾಪ್ತಿಗೆ ಶಾಲೆಗಳನ್ನು ತರಲು ಅನುಮತಿಸಿರಲಿಲ್ಲ. ನನ್ನ ಗಮನಕ್ಕೆ ಬಾರದಂತೆ ಆದೇಶ ತಿದ್ದುಪಡಿ ಮಾಡಲಾಗಿದೆ’ ಎಂದು ಸಕಿನಾ ದೂರಿದ್ದಾರೆ. 

ADVERTISEMENT

ಈ ವಿಚಾರ ಇದೀಗ ಒಮರ್‌ ಅಬ್ದುಲ್ಲಾ ನೇತೃತ್ವದ ಸರ್ಕಾರ ಹಾಗೂ ಲೆಫ್ಟಿನೆಂಟ್‌ ಗವರ್ನರ್‌ ನೇತೃತ್ವದ ಆಡಳಿತ ಇಲಾಖೆಗಳ ನಡುವಿನ ಜಟಾಪಟಿಗೆ ಕಾರಣವಾಗಿದೆ. ಇತ್ತ ವಿಪಕ್ಷಗಳು ಕೂಡ ಒಮರ್‌ ನೇತೃತ್ವದ ಸರ್ಕಾರದ ವಿರುದ್ಧ ಮುಗಿಬಿದ್ದು, ಈ ಘಟನೆಯು ಅಧಿಕಾರ ಅತಿಕ್ರಮಣದ ಸ್ಪಷ್ಟ ನಿದರ್ಶನವಾಗಿದ್ದು, ಒಮರ್‌ ಸರ್ಕಾರದ ಅಸಮರ್ಥತೆಯನ್ನು ತೋರಿಸುತ್ತದೆ ಎಂದು ಟೀಕಿಸಿವೆ. 

ಏತನ್ಮಧ್ಯೆ, ಎಫ್‌ಎಟಿ ಶಾಲೆಗಳಲ್ಲಿ ನೋಂದಣಿ ಹೊಂದಿರುವ ವಿದ್ಯಾರ್ಥಿಗಳ ಪೋಷಕರಲ್ಲಿ ಮಕ್ಕಳ ಭವಿಷ್ಯದ ಆತಂಕ ಮನೆ ಮಾಡಿದ್ದರೆ, ಶಿಕ್ಷಕರು ತಮ್ಮ ಹುದ್ದೆ ಉಳಿಯುವುದೋ? ನೆಲಕಚ್ಚುವುದೋ ಎಂಬ ಗೊಂದಲಕ್ಕೀಡಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.