ನಾಂದೇಡ್, ಮಹಾರಾಷ್ಟ್ರ: ‘ತಂದೆ ತನಗೆ ಸ್ಮಾರ್ಟ್‌ಫೋನ್ ಕೊಡಿಸಲಿಲ್ಲ’ ಎಂದು ಮನನೊಂದು 16 ವರ್ಷದ ಬಾಲಕನೊಬ್ಬ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇನ್ನೊಂದು ವಿಚಿತ್ರವೆಂದರೆ ಮಗನ ಶವ ನೋಡಿ ಆತನ ತಂದೆ ‘ಮಗನಿಗೆ ಸ್ಮಾರ್ಟ್‌ಫೋನ್ ಕೊಡಿಸಲು ಆಗಲಿಲ್ಲ’ ಎಂದು ತಾನೂ ಸಹ ಅದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.
ನಾಂದೇಡ್ ಜಿಲ್ಲೆಯ ಬಿಳೋಳಿ ತಾಲ್ಲೂಕಿನ ಮಿನಾಕಿ ಎಂಬಲ್ಲಿ ಈ ದುರ್ಘಟನೆ ನಡೆದಿದೆ.
ಮೃತರನ್ನು 16 ವರ್ಷದ ಬಾಲಕ ಓಂಕಾರ್ ಹಾಗೂ ಆತನ ತಂದೆ ರಾಜು (46) ಎಂದು ಗುರುತಿಸಲಾಗಿದೆ.
ರಾಜು ಅವರಿಗೆ ಮೂವರು ಮಕ್ಕಳು. ಕೊನೆಯ ಮಗ ಓಂಕಾರ್ ಹಾಸ್ಟೆಲ್ ಒಂದರಲ್ಲಿ ಇದ್ದುಕೊಂಡು 10 ನೇ ತರಗತಿ ಓದುತ್ತಿದ್ದ. ಮಕರ ಸಂಕ್ರಮಣದ ರಜೆಗೆ ಮನೆಗೆ ಬಂದಿದ್ದ.
‘ಇದೇ ವೇಳೆ ಬಾಲಕ ಓಂಕಾರ್ ತನ್ನ ತಂದೆಗೆ ಸ್ಮಾರ್ಟ್‌ಫೋನ್ ಕೊಡಿಸುವಂತೆ ಒತ್ತಾಯಿಸುತ್ತಿದ್ದ. ಆದರೆ ಬಡ ರೈತ ಕುಟುಂಬದ ರಾಜು ಮಗನಿಗೆ ಸ್ಮಾರ್ಟ್‌ಫೋನ್ ಕೊಡಿಸಲು ಆಗಿರಲಿಲ್ಲ. ಇದರಿಂದ ಡೆತ್ ನೋಟ್ ಬರೆದಿಟ್ಟು ಹೊಲದಲ್ಲಿನ ಮರಕ್ಕೆ ಬಾಲಕ ನೇಣು ಹಾಕಿಕೊಂಡಿದ್ದ. ಅದೇ ರಾತ್ರಿ ಮಗನನ್ನು ಹುಡುಕಿಕೊಂಡು ಹೋಗಿದ್ದ ತಂದೆಯೂ ಮಗ ನೇಣು ಹಾಕಿಕೊಂಡಿದ್ದನ್ನು ನೋಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ನಾಂದೇಡ್ ಎಸ್‌ಪಿ ಅವಿನಾಶ್ ಕುಮಾರ್ ತಿಳಿಸಿದ್ದಾರೆ.
ಮೃತ ಬಾಲಕ ತಾಯಿ ನೀಡಿದ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದ. ಮೃತದೇಹಗಳನ್ನು ಬಿಳೋಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಅವರು ಹೇಳಿದ್ದಾರೆ. ಈ ಕುರಿತು ನ್ಯೂಸ್ 18 ವೆಬ್‌ಸೈಟ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.