ಸಾಂದರ್ಭಿಕ ಚಿತ್ರ
ನಾಸಿಕ್: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ವ್ಯಕ್ತಿ ಮತ್ತು ಆತನ ಪುತ್ರನ ನೆರೆಮನೆಯ ವ್ಯಕ್ತಿಯನ್ನು ಕೊಂದು, ಆತನ ರುಂಡದೊಂದಿಗೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದರು.
ಡಿಂಡೋರಿ ತಾಲ್ಲೂಕಿನ ನಾನಾಶಿ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಕೃತ್ಯ ನಡೆದಿದೆ. ಪೊಲೀಸರು ಆರೋಪಿ ಸುರೇಶ್ ಬೋಕೆಯನ್ನು (40) ಬಂಧಿಸಿದ್ದಾರೆ ಮತ್ತು ಆತನ ಮಗನನ್ನು ವಶಕ್ಕೆ ಪಡೆದಿದ್ದಾರೆ. ಪುತ್ರನ ವಯಸ್ಸು ಎಷ್ಟು ಎಂದು ಇನ್ನಷ್ಟೇ ತಿಳಿಯಬೇಕಿದೆ.
‘ಗುಲಾಬ್ ರಾಮಚಂದ್ರ ವಾಘ್ಮರೆ (35) ಅವರನ್ನು ಆರೋಪಿ ಸುರೇಶ್ ಕೊಡಲಿ ಮತ್ತು ಕತ್ತಿಯಿಂದ ಕೊಚ್ಚಿ ಕೊಲೆಗೈದಿದ್ದಾನೆ. ನಂತರ ಸಂತ್ರಸ್ತನ ರುಂಡ ಮತ್ತು ಕೊಲ್ಲಲು ಬಳಸಿದ್ದ ಸಾಧನಗಳ ಜೊತೆಗೆ ನಾನಾಶಿ ಪೊಲೀಸ್ ಹೊರಠಾಣೆಗೆ ಬಂದು ಶರಣಾಗಿದ್ದಾನೆ’ ಎಂದು ಅವರು ಮಾಹಿತಿ ನೀಡಿದರು.
ಹತ್ಯೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಆರೋಪಿಗಳ ಮನೆಯನ್ನು ಕೆಡವಿ, ಕಾರಿಗೆ ಬೆಂಕಿ ಇಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದರು.
ತನ್ನ ಪುತ್ರಿ ಮನೆಯಿಂದ ಓಡಿಹೋಗಲು ವಾಘ್ಮರೆ ಪುಸಲಾಯಿಸಿದ್ದ ಶಂಕೆಯ ಮೇರೆಗೆ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಸ್ಥಳೀಯರು ಹೇಳಿರುವುದಾಗಿ ಮಾಹಿತಿ ನೀಡಿದರು.
‘ಆರೋಪಿಗಳು ಮತ್ತು ಸಂತ್ರಸ್ತ ಅಕ್ಕ–ಪಕ್ಕದ ಮನೆಯವರು. ಅವರ ಮಧ್ಯೆ ಸುದೀರ್ಘ ಕಾಲದಿಂದ ವ್ಯಾಜ್ಯ ಇತ್ತು. ಪರಸ್ಪರರ ವಿರುದ್ಧ ಡಿಸೆಂಬರ್ 31ರಂದು ದೂರು ನೀಡಲಾಗಿತ್ತು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.