
ನವದೆಹಲಿ: ದೇಶದ ವಿಮಾ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ (ಎಫ್‌ಡಿಐ) ಪ್ರಮಾಣವನ್ನು ಶೇಕಡ 100ಕ್ಕೆ ಹೆಚ್ಚಿಸಲು ಅವಕಾಶ ಕಲ್ಪಿಸುವ ಮಸೂದೆಯನ್ನು ಮುಂಬರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಆಲೋಚನೆ ನಡೆಸಿದೆ.
ಸಂಸತ್ತಿನ ಚಳಿಗಾಲದ ಅಧಿವೇಶನವು ಡಿಸೆಂಬರ್ 1ರಿಂದ ಶುರುವಾಗಲಿದೆ. ಲೋಕಸಭಾ ಸುದ್ದಿಪತ್ರದಲ್ಲಿ ಇರುವ ಮಾಹಿತಿ ಪ್ರಕಾರ, ವಿಮಾ ಕಾನೂನುಗಳ (ತಿದ್ದುಪಡಿ) ಮಸೂದೆಯು ಮಂಡನೆ ಆಗಲಿದೆ.
ಎಫ್‌ಡಿಐ ಮಿತಿಯನ್ನು ಈಗಿನ ಶೇ 74ರ ಬದಲು, ಶೇ 100ಕ್ಕೆ ಹೆಚ್ಚಿಸುವ ಪ್ರಸ್ತಾವವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ವರ್ಷದ ಬಜೆಟ್ ಭಾಷಣದಲ್ಲಿ ಮಾಡಿದ್ದರು. ಹೊಸ ತಲೆಮಾರಿನ ಹಣಕಾಸು ಸುಧಾರಣೆಗಳ ಭಾಗವಾಗಿ ಈ ಕ್ರಮ ಎಂದು ಅವರು ಹೇಳಿದ್ದರು.
ಇದುವರೆಗೆ ದೇಶದ ವಿಮಾ ವಲಯವು ₹82 ಸಾವಿರ ಕೋಟಿ ವಿದೇಶಿ ನೇರ ಬಂಡವಾಳ ಆಕರ್ಷಿಸಿದೆ.
ವಿಮಾ ಕಾಯ್ದೆ –1938, ಜೀವ ವಿಮಾ ನಿಗಮ ಕಾಯ್ದೆ – 1956 ಮತ್ತು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ – 1999ಕ್ಕೆ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ.
ಎಲ್‌ಐಸಿ ಕಾಯ್ದೆಗೆ ತರಲು ಉದ್ದೇಶಿಸಿರುವ ಬದಲಾವಣೆಗಳು, ಭಾರತೀಯ ಜೀವ ವಿಮಾ ನಿಗಮದ ಆಡಳಿತ ಮಂಡಳಿಗೆ ಕಾರ್ಯಾಚರಣೆ ತೀರ್ಮಾನಗಳನ್ನು ತೆಗೆದುಕೊಳ್ಳುವ ಅಧಿಕಾರ ನೀಡುವ ಪ್ರಸ್ತಾವನೆ ಹೊಂದಿವೆ. ತಿದ್ದುಪಡಿಯು ಕಾನೂನಾಗಿ ಜಾರಿಗೆ ಬಂದರೆ ಶಾಖೆಗಳ ವಿಸ್ತರಣೆ, ನೇಮಕಾತಿಯಂತಹ ತೀರ್ಮಾನಗಳನ್ನು ಆಡಳಿತ ಮಂಡಳಿಯೇ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.
ಪ್ರಸ್ತಾವಿತ ತಿದ್ದುಪಡಿಗಳು ವಿಮಾ ಪಾಲಿಸಿ ಹೊಂದಿರುವವರ ಹಿತಾಸಕ್ತಿ ಕಾಯುವ, ಅವರ ಹಣಕಾಸಿನ ಭದ್ರತೆಯನ್ನು ಹೆಚ್ಚಿಸುವ, ವಿಮಾ ವಲಯಕ್ಕೆ ಇನ್ನಷ್ಟು ಹೆಚ್ಚು ಕಂಪನಿಗಳು ಪ್ರವೇಶಿಸುವುದಕ್ಕೆ ನೆರವು ಒದಗಿಸುವ, ಆ ಮೂಲಕ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುವ ಉದ್ದೇಶ ಹೊಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.