ADVERTISEMENT

ಉತ್ತರ ಪ್ರದೇಶ: ಪೊಲೀಸರ ಬೆದರಿಕೆಯಿಂದ ಗ್ರಾಮ ತೊರೆದ 70 ಮುಸ್ಲಿಂ ಕುಟುಂಬಗಳು

ಕನ್ವಾರ್ ಯಾತ್ರೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2018, 7:17 IST
Last Updated 9 ಆಗಸ್ಟ್ 2018, 7:17 IST
ಕನ್ವಾರ್ ಯಾತ್ರೆಯ ಸಂಗ್ರಹ ಚಿತ್ರ
ಕನ್ವಾರ್ ಯಾತ್ರೆಯ ಸಂಗ್ರಹ ಚಿತ್ರ   

ಲಖನೌ: ಪೊಲೀಸರ ಬೆದರಿಕೆಗೆ ಮಣಿದು ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಖೇಲುಮ್ ಗ್ರಾಮದ ಸುಮಾರು 70 ಮುಸ್ಲಿಂ ಕುಟುಂಬಗಳು ಗ್ರಾಮ ತೊರೆದಿರುವ ವಿಷಯ ಬೆಳಕಿಗೆ ಬಂದಿದೆ.

ಕನ್ವಾರ್ ಯಾತ್ರೆ (ಶಿವನ ಭಕ್ತರು ಕೈಗೊಳ್ಳುವ ವಾರ್ಷಿಕ ಯಾತ್ರೆ) ಸಂದರ್ಭ ನೀವು ಸಮಸ್ಯೆ ಸೃಷ್ಟಿಸುವ ಬಗ್ಗೆ ನಮಗೆ ಸುಳಿವು ದೊರೆತಿದೆ. ಯಾತ್ರೆ ವೇಳೆ ಏನಾದರೂ ಸಂಘರ್ಷ ಸೃಷ್ಟಿಸಿದಲ್ಲಿ ನಿಮ್ಮ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಿಮ್ಮನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡುತ್ತಿದ್ದೇವೆ.’ ಇದು ಪೊಲೀಸರು ಖೇಲುಮ್ ಗ್ರಾಮದ ಕನಿಷ್ಠ 250 ಜನರಿಗೆ (ಹಿಂದೂ ಮತ್ತು ಮುಸ್ಲಿಮರು) ಕಳೆದ ವಾರ ನೀಡಿರುವ ಎಚ್ಚರಿಕೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಜಿಲ್ಲಾಡಳಿತವೂ ಸುಮಾರು 441 ಮಂದಿ ಸ್ಥಳೀಯರನ್ನು ಸಂಘರ್ಷಕ್ಕೆ ಕಾರಣರಾಗಬಲ್ಲವರು ಎಂದು ಗುರುತಿಸಿದ್ದು, ಅವರಿಂದ ₹5 ಲಕ್ಷ ಬಾಂಡ್‌ಗೆ ಸಹಿ ಹಾಕಿಸಿಕೊಂಡಿದೆ.

ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಖೇಲುಮ್‌ ಪ್ರದೇಶದಲ್ಲಿ ಕಳೆದ ವರ್ಷ ಯಾತ್ರೆ ಹಾದುಹೋಗುತ್ತಿದ್ದ ವೇಳೆ ಹಿಂಸಾಚಾರ ನಡೆದಿತ್ತು. ಉಭಯ ಕೋಮಿನ ಹತ್ತಾರು ಜನ ಗಾಯಗೊಂಡಿದ್ದರು. 15 ಮಂದಿ ಭದ್ರತಾ ಸಿಬ್ಬಂದಿಯೂ ಗಾಯಗೊಂಡಿದ್ದರು. ಘಟನೆಗೆ ಸಂಬಂಧಿಸಿ ಎರಡು ಎಫ್‌ಐಆರ್ ದಾಖಲಾಗಿದ್ದವು. ಈ ಪೈಕಿ ಒಂದರಲ್ಲಿ 29 ಮುಸ್ಲಿಮರನ್ನು ಮತ್ತು ಮತ್ತೊಂದರಲ್ಲಿ 14 ಹಿಂದೂಗಳನ್ನು ಹೆಸರಿಸಲಾಗಿತ್ತು.

ಕಳೆದ ವರ್ಷ ಹಾದುಹೋದ ಮಾರ್ಗದಲ್ಲೇ ಈ ಬಾರಿಯೂ ಯಾತ್ರೆ ನಡೆಯಲಿದೆ. ಯಾತ್ರೆ ಶಾಂತಿಯುತವಾಗಿ ನಡೆಯಲಿದೆ ಎಂದು ವಿಶ್ವಾದಲ್ಲಿರುವ ಹಿಂದೂಗಳು ₹5 ಲಕ್ಷದ ಬಾಂಡ್ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆದರೆ, ಇದರಿಂದ ಮುಸ್ಲಿಮರು ಭೀತಿಗೊಳಗಾಗಿದ್ದಾರೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್ ವರದಿ ಉಲ್ಲೇಖಿಸಿದೆ.

ಯಾತ್ರೆ ಹಾದುಹೋಗುವ ಮಾರ್ದಲ್ಲಿರುವ ಅಂಗಡಿ ಮುಂಗಟ್ಟುಗಳೆಲ್ಲ ಮಂಗಳವಾರವೇ ಮುಚ್ಚಿರುವುದು ಕಂಡುಬಂದಿದೆ. ಇಡೀ ಪ್ರದೇಶವೇ ಬಿಕೋ ಎನ್ನುತ್ತಿದೆ. 5,000 ಜನಸಂಖ್ಯೆ ಇರುವ ಖೇಲುಮ್‌ನಲ್ಲಿ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಶೇ 70ರಷ್ಟಿರುವ ಇವರು ಕೃಷಿ, ಕಾರ್ಮಿಕರಾಗಿ ದುಡಿಯುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಕಳೆದ ಜನವರಿಯಲ್ಲಿ ಉತ್ತರ ಪ್ರದೇಶದ ಕಾಸ್‌ಗಂಜ್‌ನ ಮುಸ್ಲಿಂ ಬಾಹುಳ್ಯವಿರುವ ಪ್ರದೇಶದಲ್ಲಿಯೂ ಹಿಂಸಾಚಾರ ಸಂಭವಿಸಿತ್ತು. ಗಣರಾಜ್ಯೋತ್ಸವ ದಿನದಂದು ನಡೆಸಲಾಗಿದ್ದ ‘ತಿರಂಗಾ ಯಾತ್ರೆ’ಯ ಸಂದರ್ಭ ಉಭಯ ಕೋಮುಗಳ ಮಧ್ಯೆ ಗಲಭೆ ನಡೆದಿತ್ತು. ಘಟನೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದ.

ಇದನ್ನೂ ಓದಿ: ಕಾಸ್‌ಗಂಜ್‌ ಹಿಂಸಾಚಾರ: ಇಂಟರ್‌ನೆಟ್‌ ಸೇವೆ ಸ್ಥಗಿತ, ನಿಷೇಧಾಜ್ಞೆ ಜಾರಿ

ಬಳಿಕ ಈ ಕುರಿತು ಪ್ರತಿಕ್ರಿಯಿಸಿದ್ದ ಬರೇಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಘವೇಂದ್ರ ವಿಕ್ರಂ ಸಿಂಗ್, ‘ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಿಗೆ ನುಗ್ಗಿ ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗುವ ಪ್ರಕರಣಗಳು ಹೆಚ್ಚುತ್ತಿವೆ’ ಎಂದಿದ್ದರು.

‘ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಲ್ಲಿ ಬಲವಂತವಾಗಿ ಮೆರವಣಿಗೆ ನಡೆಸುವುದು, ಅಲ್ಲಿ ಪಾಕಿಸ್ತಾನ ವಿರೋಧಿ ಘೋಷಣೆಗಳನ್ನು ಕೂಗುವುದು ಟ್ರೆಂಡ್ ಆಗಿಬಿಟ್ಟಿದೆ. ಯಾಕೆ? ಅವರೇನು ಪಾಕಿಸ್ತಾನದವರಾ?’ ಎಂದು ಫೇಸ್‌ಬುಕ್‌ನಲ್ಲಿ ಪ್ರಶ್ನಿಸಿದ್ದರು.

ಇದನ್ನೂ ಓದಿ: ಮುಸ್ಲಿಮರಿರುವ ಪ್ರದೇಶಕ್ಕೆ ನುಗ್ಗಿ ಪಾಕ್ ವಿರೋಧಿ ಘೋಷಣೆ ಕೂಗುವುದಕ್ಕೆ ಬರೇಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಕ್ಷೇಪ

ಇನ್ನಷ್ಟು...

* ಧರ್ಮದ ಹೆಸರಲ್ಲಿ ಬೇರಾದವರು, ನೋವಿನಲ್ಲಿ ಒಂದಾದರು: ನ್ಯಾಯಕ್ಕಾಗಿ ಹೋರಾಡುತ್ತಿವೆ ಬಂಧಿತರ ಕುಟುಂಬಗಳು

* ಕಾಸ್‌ಗಂಜ್ ಹಿಂಸಾಚಾರ: ಯುವಕ ಗುಂಡು ಹಾರಿಸುತ್ತಿರುವ ವಿಡಿಯೊ ಬಹಿರಂಗ

* ಕಾಸ್‌ಗಂಜ್‌ ಹಿಂಸಾಚಾರ: ಘಟನೆ ಮರುಕಳಿಸದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು -ಗವರ್ನರ್ ರಾಮ್‌ ನಾಯ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.