ADVERTISEMENT

ರಸಗೊಬ್ಬರ ಸಮಸ್ಯೆ: ಲೋಕಸಭೆಯಲ್ಲಿ ‍ಪ್ರತಿಧ್ವನಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 7:07 IST
Last Updated 30 ಜುಲೈ 2025, 7:07 IST
<div class="paragraphs"><p>ಡಾ.ಕೆ.ಸುಧಾಕರ್</p></div>

ಡಾ.ಕೆ.ಸುಧಾಕರ್

   

ನವದೆಹಲಿ: ಕರ್ನಾಟಕದಲ್ಲಿ ಕಾಳಸಂತೆಯಲ್ಲಿ ದುಪ್ಪಟ್ಟು ಬೆಲೆಗೆ ರಸಗೊಬ್ಬರ ಮಾರಾಟ ಮಾಡಲಾಗುತ್ತಿದೆ ಎಂದು ಚಿಕ್ಕಬಳ್ಳಾಪುರ ಸಂಸದ ಡಾ.ಕೆ. ಸುಧಾಕರ್ ಆರೋಪಿಸಿದರು. 

ಲೋಕಸಭೆಯಲ್ಲಿ ಬುಧವಾರ ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, ‘ಮುಂಗಾರು ಅವಧಿ ಕೃಷಿಗೆ ನಿರ್ಣಾಯಕ. ಈ ಸಮಯದಲ್ಲಿ ಭತ್ತ, ಜೋಳ, ದ್ವಿದಳಧಾನ್ಯ, ಸೋಯಾಬಿನ್‌ ಸೇರಿದಂತೆ ವಿವಿಧ ಬೆಳೆಗಳನ್ನು ರೈತರು ಬೆಳೆಯುತ್ತಾರೆ. ದುರದೃಷ್ಟವಶಾತ್‌ ಜಾಗತಿಕ ಮಟ್ಟದಲ್ಲಿ ಯುದ್ಧದ ವಾತಾವರಣದ ನಡುವೆಯೂ ನಡುವೆಯೂ ಕೇಂದ್ರದ ಬಿಜೆಪಿ ಸರ್ಕಾರವು ಈ ಹಂಗಾಮಿನಲ್ಲಿ 8.13 ಲಕ್ಷ ಟನ್‌ ಯೂರಿಯಾವನ್ನು ರಾಜ್ಯಕ್ಕೆ ಕಳುಹಿಸಿದೆ. ಭ್ರಷ್ಟಾಚಾರ ಹಾಗೂ ದುರಾಡಳಿತದಲ್ಲಿ ತೊಡಗಿರುವ ಕಾಂಗ್ರೆಸ್‌ ಸರ್ಕಾರದ ಅಸಮರ್ಪಕ ಆಡಳಿತದಿಂದ ರೈತರಿಗೆ ಭಾರಿ ತೊಂದರೆ ಆಗಿದೆ’ ಎಂದು ಗಮನ ಸೆಳೆದರು. 

ADVERTISEMENT

‘ರಾಜ್ಯದಲ್ಲಿ ದಾಸ್ತಾನು ಇದ್ದರೂ ಯೂರಿಯಾ ಹಾಗೂ ಡಿಎಪಿ ಹಂಚಿಕೆ ಮಾಡಿಲ್ಲ. ಈ ಮೂಲಕ ರೈತರಿಗೆ  ಅನ್ಯಾಯ ಮಾಡಿದೆ. ರಾಜ್ಯದಲ್ಲಿ ₹258ದಲ್ಲಿ ಕ್ವಿಂಟಲ್‌ ಯೂರಿಯಾ ಸಿಗಬೇಕಿತ್ತು. ಆದರೆ, ಅದನ್ನು ₹500 ಕ್ಕೆ ಮಾರಾಟ ಮಾಡಲಾಗುತ್ತಿದೆ. ಡಿಎಪಿಯನ್ನು ಕ್ವಿಂಟಲ್‌ಗೆ ₹ 1200 ಬದಲು ₹2000ಕ್ಕೆ ಮಾರಲಾಗುತ್ತಿದೆ. ಕೇಂದ್ರ ಸರ್ಕಾರವು ಮಧ್ಯ ಪ್ರವೇಶ ಮಾಡಿ ಸಮರ್ಪಕ ರಸಗೊಬ್ಬರ ಪೂರೈಕೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ಕೊಡಬೇಕು’ ಎಂದು ಅವರು ಆಗ್ರಹಿಸಿದರು. 

ತೆಂಗಿಗೆ ರೋಗ ಬಾಧೆ: ಶ್ರೇಯಸ್‌ ಪ್ರಸ್ತಾಪ 

ಹಾಸನ ಜಿಲ್ಲೆಯಲ್ಲಿ ರೋಗಬಾಧೆಯಿಂದ ಮೆಕ್ಕೆಜೋಳ ಹಾಗೂ ತೆಂಗಿನ ಕೃಷಿಗೆ ಅಪಾರ ಪ್ರಮಾನದ ಹಾನಿ ಆಗಿದೆ ಎಂದು ಸಂಸದ ಶ್ರೇಯಸ್‌ ಪಟೇಲ್‌ ಗಮನ ಸೆಳೆದರು. 

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ಬಿಳಿ ಸುಳಿ ರೋಗದಿಂದ ಫಂಗಲ್ ಕಾಯಿಲೆಯಿಂದ ಮೆಕ್ಕೆಜೋಳಕ್ಕೆ ಭಾರಿ ಹಾನಿ ಆಗಿದೆ. 45 ಸಾವಿರ ಹೆಕ್ಟೇರ್‌ ಪೈಕಿ 12 ಸಾವಿರ ಹೆಕ್ಟೇರ್‌ ಕೃಷಿಗೆ ಈಗಾಗಲೇ ಹಾನಿಗೀಡಾಗಿದೆ. ಕೃಷಿಕರಿಗೆ ಪರಿಹಾರ ನೀಡಬೇಕು ಎಂದು ಐಸಿಎಆರ್ ತಜ್ಞರ ತಂಡ ಶಿಫಾರಸು ಮಾಡಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. 

ಅರಸಿಕೆರೆ ಹಾಗೂ ಚನ್ನರಾಯಪಟ್ಟಣ ತಾಲ್ಲೂಕುಗಳಲ್ಲೇ 1.18 ಲಕ್ಷ ಹೆಕ್ಟೇರ್ ತೆಂಗು ಬೆಳೆ ರೋಗಪೀಡಿತವಾಗಿದೆ. ಹೀಗಾಗಿ, ತೆಂಗು ಅಭಿವೃದ್ಧಿ ಮಂಡಳಿಗೆ ವಿಶೇಷ ಪ್ಯಾಕೇಜ್‌ ಘೋಷಿಸಿ ರೈತರಿಗೆ ನೆರವಾಗಬೇಕು ಎಂದು ಅವರು ಒತ್ತಾಯಿಸಿದರು. 

ನರೇಗಾ: ಬಾಕಿ ಬಿಡುಗಡೆಗೆ ಒತ್ತಾಯ 

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರಾಜ್ಯಕ್ಕೆ ₹374 ಕೋಟಿ ಬಿಡುಗಡೆಗೆ ಬಾಕಿ ಇದೆ. ಈ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಬಳ್ಳಾರಿ ಸಂಸದ ಇ.ತುಕಾರಾಮ್‌ ಮನವಿ ಮಾಡಿದರು. 

ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ವಿವಿಧ ರಾಜ್ಯಗಳಿಗೆ ₹14,603 ಕೋಟಿ ಬಿಡುಗಡೆ ಮಾಡಬೇಕಿದೆ. ಇದರಲ್ಲಿ ಕೂಲಿ ಹಾಗೂ ಸಾಮಗ್ರಿಗಳ ಮೊತ್ತ ಸೇರಿದೆ. ಬಾಕಿ ಬಿಡುಗಡೆ ಮಾಡದಿರುವುದರಿಂದ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ತೊಂದರೆ ಆಗಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.