ADVERTISEMENT

ಅಗತ್ಯದಷ್ಟು ವೆಂಟಿಲೇಟರ್ ಪೂರೈಸದ ಕೇಂದ್ರ ಸರ್ಕಾರ

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 18:55 IST
Last Updated 24 ಜುಲೈ 2020, 18:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ಮುಂಬೈ: ರಾಜ್ಯ ಸರ್ಕಾರಗಳು ಸಲ್ಲಿಸಿದ್ದ ಬೇಡಿಕೆಗಿಂತ ಕಡಿಮೆ ಸಂಖ್ಯೆಯವೆಂಟಿಲೇಟರ್‌ಗಳನ್ನು ಕೇಂದ್ರ ಸರ್ಕಾರವು ಈವರೆಗೆ ಪೂರೈಕೆ ಮಾಡಿದೆ. ಕೆಲವು ರಾಜ್ಯಗಳಿಗೆ ಮಾತ್ರ ಅವು ಬೇಡಿಕೆ ಸಲ್ಲಿಸಿದ್ದಷ್ಟು ಸಂಖ್ಯೆಯ ವೆಂಟಿಲೇಟರ್‌ ಪೂರೈಕೆಯಾಗಿದೆ. ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಿಗೆ ಇನ್ನೂ ಸಾವಿರಾರು ವೆಂಟಿಲೇಟರ್‌ಗಳನ್ನು ಪೂರೈಕೆ ಮಾಡಬೇಕಿದೆ.

ಮುಂಬೈನ ಮಾಹಿತಿ ಹಕ್ಕು ಕಾರ್ಯಕರ್ತ ಅನಿಲ್ ಗಲಗಲಿ ಅವರು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿ ಸಲ್ಲಿಸಿದ್ದ ಅರ್ಜಿಗೆ ಕೇಂದ್ರ ಸರ್ಕಾರ ನೀಡಿರುವ ಉತ್ತರದಲ್ಲಿ ಈ ಮಾಹಿತಿ ಇದೆ. ಎಲ್ಲಾ ರಾಜ್ಯಗಳು ಸಲ್ಲಿಸಿದ್ದ ವೆಂಟಿಲೇಟರ್‌ಗಳ ಸಂಖ್ಯೆಯಲ್ಲಿ ಶೇ 51ರಷ್ಟನ್ನು ಮಾತ್ರ ಕೇಂದ್ರ ಸರ್ಕಾರ ಪೂರೈಕೆ ಮಾಡಿದೆ. ಇದು ಜುಲೈ 10ರವರೆಗಿನ ಮಾಹಿತಿ.

ಛತ್ತೀಸಗಡ, ಉತ್ತರಾಖಂಡ, ಒಡಿಶಾ ರಾಜ್ಯಗಳು, ಚಂಡೀಗಡ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳಿಗೆ ಮಾತ್ರ ಅವು ಬೇಡಿಕೆ ಸಲ್ಲಿಸಿದ್ದಷ್ಟು ವೆಂಟಿಲೇಟರ್‌ಗಳನ್ನು ಪೂರೈಕೆ ಮಾಡಲಾಗಿದೆ. ಸಿಕ್ಕಿಂ, ಲಕ್ಷದ್ವೀಪ ಮತ್ತು ಲಡಾಖ್‌ಗಳಿಗೆ ಈವರೆಗೆ ಒಂದೂ ವೆಂಟಿಲೇಟರ್‌ ಪೂರೈಕೆ ಆಗಿಲ್ಲ. ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ಸೇರಿ ಹಲವು ರಾಜ್ಯಗಳಿಗೆ ಇನ್ನಷ್ಟು ವೆಂಟಿಲೇಟರ್‌ಗಳನ್ನು ಪೂರೈಕೆ ಮಾಡಬೇಕಿದೆ.

ADVERTISEMENT

ಯಾವ ರಾಜ್ಯಗಳಿಗೆ ಎಷ್ಟು ವೆಂಟಿಲೇಟರ್‌ಗಳು, ಎನ್‌95 ಮಾಸ್ಕ್‌‌, ಪಿಪಿಇ ಕಿಟ್‌ಗಳನ್ನು ಪೂರೈಕೆ ಮಾಡಲಾಗಿದೆ ಎಂಬ ಮಾಹಿತಿಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನೀಡಿದೆ. ಹೆಚ್ಚು ಕೋವಿಡ್‌ ಪ್ರಕರಣಗಳು ಪತ್ತೆಯಾಗಿರುವ ಮಹಾರಾಷ್ಟ್ರಕ್ಕೆ ಹೆಚ್ಚಿನ ಸಂಖ್ಯೆ ಮಾಸ್ಕ್‌, ವೆಂಟಿಲೇಟರ್‌, ಪಿಪಿಇ ಕಿಟ್‌ ಪೂರೈಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.