ADVERTISEMENT

ಭ್ರಷ್ಟಾಚಾರ ಆರೋಪ: ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ವಿರುದ್ಧ ಎಫ್ಐಆರ್

ಪಿಟಿಐ
Published 29 ಏಪ್ರಿಲ್ 2021, 4:18 IST
Last Updated 29 ಏಪ್ರಿಲ್ 2021, 4:18 IST
ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್
ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್    

ಮುಂಬೈ: ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ವಿರುದ್ಧ ಮಹಾರಾಷ್ಟ್ರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಪರಮ್ ಬೀರ್ ಸಿಂಗ್ ಅವರ ವಿರುದ್ಧ ಪೊಲೀಸ್ ಇನ್‌ಸ್ಪೆಕ್ಟರ್ ಒಬ್ಬರು ಭ್ರಷ್ಟಾಚಾರದ ಆರೋಪ ಹೊರಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಸಿಂಗ್, ಡಿಸಿಪಿ ಪರಾಗ್ ಮಾನೆರೆ ಮತ್ತು ಇತರ 26 ಪೊಲೀಸರ ವಿರುದ್ಧ ವಿದರ್ಭದ ಅಕೋಲಾದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಅಪರಾಧ ಪಿತೂರಿ, ಸಾಕ್ಷ್ಯಗಳ ನಾಶ ಮತ್ತು 1989 ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ ಕಾಯ್ದೆ) ಸೇರಿ ವಿವಿಧ ವಿಭಾಗಗಳ ಅಡಿಯಲ್ಲಿ ಅಕೋಲಾದ ಕೊಟ್ವಾಲಿ ನಗರದ ಪೊಲೀಸರು ಪೊಲೀಸ್ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ADVERTISEMENT

ಅಕೋಲಾ ಪೊಲೀಸರು ಕೋಟ್ವಾಲಿ ಪೊಲೀಸ್ ಠಾಣೆಯಲ್ಲಿ ಶೂನ್ಯ ಎಫ್‌ಐಆರ್ (ಆ ಪ್ರದೇಶದಲ್ಲಿ ಅಥವಾ ಇನ್ನಾವುದೇ ಪ್ರದೇಶದಲ್ಲಿ ಮಾಡಿದ ಅಪರಾಧವನ್ನು ಲೆಕ್ಕಿಸದೆ ಯಾವುದೇ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸುವ ವಿಧಾನ) ದಾಖಲಿಸಿದ್ದಾರೆ ಮತ್ತು ಅದನ್ನು ಠಾಣೆ ನಗರ ಪೊಲೀಸರಿಗೆ ವರ್ಗಾಯಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಪೊಲೀಸ್ ಇನ್ಸ್‌ಪೆಕ್ಟರ್ ಭೀಮರಾವ್ ಘಡ್ಜ್ ಅವರು ತಮ್ಮ ದೂರಿನಲ್ಲಿ ಸಿಂಗ್ ಮತ್ತು ಇತರ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದಾರೆ.

2015-2018ರ ಅವಧಿಯಲ್ಲಿ ಠಾಣೆ ನಗರ ಪೊಲೀಸ್ ಕಮಿಷನರೇಟ್‌ನಲ್ಲಿ ನೇಮಕಗೊಂಡಿದ್ದ ಘಡ್ಜ್ ಅವರ ಅಧಿಕಾರಾವಧಿಯಲ್ಲಿ ಸಿಂಗ್ ನೇತೃತ್ವದ ಹಲವಾರು ಅಧಿಕಾರಿಗಳು ವಿವಿಧ ಭ್ರಷ್ಟಾಚಾರ ಕೃತ್ಯಗಳಲ್ಲಿ ತೊಡಗಿದ್ದರು ಎಂದು ಆರೋಪಿಸಿದ್ದಾರೆ. ಎಫ್‌ಐಆರ್ ದಾಖಲಾಗಿರುವ ಕೆಲವು ವ್ಯಕ್ತಿಗಳ ವಿರುದ್ಧ ಚಾರ್ಜ್‌ಶೀಟ್ ಹಾಕದಂತೆ ಸಿಂಗ್ ಕೇಳಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಈಗ ಅಕೋಲಾ ಪೊಲೀಸ್ ನಿಯಂತ್ರಣ ಕೊಠಡಿಯಲ್ಲಿ ನಿಯೋಜನೆಗೊಂಡಿರುವ ಘಡ್ಜ್, ಸಿಂಗ್ ಅವರ ಸೂಚನೆಗಳನ್ನು ಪಾಲಿಸಲು ನಿರಾಕರಿಸಿದ ನಂತರ, ಅವರ ವಿರುದ್ಧ ಐದು ಎಫ್ಐಆರ್‌ಗಳನ್ನು ದಾಖಲಿಸಲಾಗಿದೆ ಮತ್ತು ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.