ಚೆನ್ನೈ: ಈಶಾ ಫೌಂಡೇಷನ್ ನಡೆಸುತ್ತಿರುವ ಸ್ಕೂಲ್‌ನ ನಾಲ್ವರು ಸಿಬ್ಬಂದಿ ಮತ್ತು ಈಶಾ ಹೋಂ ಸ್ಕೂಲ್‌ನ (ಐಎಚ್‌ಎಸ್) ಮಾಜಿ ವಿದ್ಯಾರ್ಥಿಯ ವಿರುದ್ಧ ಕೊಯಮತ್ತೂರು ಜಿಲ್ಲಾ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಮತ್ತೊಬ್ಬ ಮಾಜಿ ವಿದ್ಯಾರ್ಥಿಯ ತಂದೆ–ತಾಯಿ ನೀಡಿದ್ದ ದೂರು ಆಧರಿಸಿ ಎಫ್‌ಐಆರ್ ದಾಖಲಿಸಲಾಗಿದೆ. ‘ನನ್ನ ಮಗನ ಮೇಲೆ 2017 ರಿಂದ 2019ರ ಅವಧಿಯಲ್ಲಿ ಲೈಂಗಿಕ ದೌರ್ಜನ್ಯ ನಡೆದಿದೆ’ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
‘ಈಶಾ ಹೋಂ ಸ್ಕೂಲ್‌ನಲ್ಲಿ ಸಹಪಾಠಿಯೊಬ್ಬ ನನ್ನ ಮಗನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮಗ ಇದನ್ನು ಹಾಸ್ಟೆಲ್ ವಾರ್ಡನ್‌ಗಳ ಗಮನಕ್ಕೆ ತಂದರೂ ಏನೂ ಕ್ರಮ ಕೈಗೊಂಡಿಲ್ಲ. ‘ಇದನ್ನು ಯಾರಿಗೂ ತಿಳಿಸಬಾರದು’ ಎಂದು ಹೇಳಿದ್ದರು’ ಎಂದು ದೂರಲಾಗಿದೆ.
ಆರೋಪಿತ ವಿದ್ಯಾರ್ಥಿ ಹಾಗೂ ಹಾಸ್ಟೆಲ್ ವಾರ್ಡನ್ ನಿಶಾಂತ್ ಕುಮಾರ್, ಪ್ರೀತಿ ಕುಮಾರ್, ಪ್ರಕಾಶ್ ಸೋಮಯಾಜಿ ಮತ್ತು ಈಶಾ ಯೋಗ ಕೇಂದ್ರದ ಸ್ವಾಮಿ ವಿಭು ಅವರ ಹೆಸರನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಎಫ್‌ಐಆರ್ ಅನ್ನು ಕೊಯಮತ್ತೂರಿನ ಪೆರೂರಿನಲ್ಲಿರುವ ಮಹಿಳಾ ಠಾಣೆಯಲ್ಲಿ ಜನವರಿ 31, 2025ರಂದು ದಾಖಲಿಸಿದ್ದು, ಪೊಲೀಸರು ಇದರ ಪ್ರತಿಯನ್ನು ಸಂತ್ರಸ್ತ ವಿದ್ಯಾರ್ಥಿಯ ತಂದೆ–ತಾಯಿಗೆ ಮಾರ್ಚ್ 28ರಂದು ನೀಡಿದ್ದಾರೆ.
‘ಕೋರ್ಟ್ ನಿರ್ದೇಶನ ನೀಡಿದ ನಂತರವೇ ನಮಗೆ ಎಫ್‌ಐಆರ್ ಪ್ರತಿ ಕೊಡಲಾಯಿತು’ ಎಂದು ಸಂತ್ರಸ್ತ ವಿದ್ಯಾರ್ಥಿಯ ತಾಯಿ ತಿಳಿಸಿದರು.
‘ಸಹಪಾಠಿಯ ದೌರ್ಜನ್ಯ ಹೆಚ್ಚಾದಾಗ ಮಾರ್ಚ್ 2019ರಲ್ಲಿ ಇ–ಮೇಲ್ ಮೂಲಕ ಮಗ ನಮ್ಮ ಗಮನಕ್ಕೆ ತಂದಿದ್ದ. ಪೋಷಕರು ಮಕ್ಕಳ ಜೊತೆಗೆ ಫೋನ್‌ನಲ್ಲಷ್ಟೇ ಮಾತನಾಡಬಹುದು ಎಂದು ನಿರ್ಬಂಧವಿತ್ತು. ಹೀಗಾಗಿ, ಈ ಕುರಿತು ಈಶಾ ಯೋಗ ಕೇಂದ್ರದ ಸ್ಥಾಪಕ ಜಗ್ಗಿ ವಾಸುದೇವ್ ಅವರ ಜೊತೆ ಚರ್ಚಿಸಲು ಸಮಯ ಕೋರಿ ಕೇಂದ್ರಕ್ಕೆ ಇ–ಮೇಲ್ ಕಳುಹಿಸಿದ್ದೆವು. ಆದರೆ, ನಮಗೆ ಅವಕಾಶ ನೀಡಲಾಗಲಿಲ್ಲ’ ಎಂದು ವಿವರಿಸಿದರು.
ಸಂತ್ರಸ್ತ ಬಾಲಕಿ ಆಗಿದ್ದರೆ ಕ್ರಮಕೈಗೊಳ್ಳಬಹುದಿತ್ತು. ಆರೋಪಿ ಬಾಲಕ ಸಿರಿವಂತ ಕುಟುಂಬಕ್ಕೆ ಸೇರಿದ್ದು, ಏನೂ ಮಾಡಲಾಗದು ಎಂದೂ ಶಾಲಾ ಆಡಳಿತ ತಿಳಿಸಿತ್ತು. ಖಿನ್ನತೆಗೆ ಒಳಗಾಗಿದ್ದ ಮಗ ಕೋವಿಡ್ ವೇಳೆ ಆತ್ಮಹತ್ಯೆ ಮನಸ್ಥಿತಿ ಬೆಳಸಿಕೊಂಡಿದ್ದ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ಈಶಾ ಫೌಂಡೇಶನ್, ಆರೋಪಗಳು ಸುಳ್ಳಾಗಿದ್ದು, ಮಾನಹಾನಿ ಉದ್ದೇಶ ಹೊಂದಿವೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದೆ.
ಬಾಲಕನ ತಾಯಿ ಈಶಾ ಹೋಂ ಸ್ಕೂಲ್‌ನಲ್ಲಿ ಜೂನ್ 22ರಿಂದ ಕೆಲಸ ಮಾಡುತ್ತಿದ್ದರು. ಪೋಷಕರು, ವಿದ್ಯಾರ್ಥಿಗಳ ದೂರಿನಿಂದಾಗಿ ಅವರನ್ನು ಮಾರ್ಚ್ 2024ರಲ್ಲಿ ಕೆಲಸದಿಂದ ತೆಗೆಯಲಾಗಿತ್ತು. ಆ ಹಿನ್ನೆಲೆಯಲ್ಲಿ ಸುಳ್ಳು ಅರೋಪ ಹೊರಿಸುತ್ತಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.