ADVERTISEMENT

ಕೊಚ್ಚಿ | ಹಡಗಿನಲ್ಲಿ ಮುಂದುವರಿದ ಸ್ಫೋಟ: ಬೆಂಕಿ ನಿಯಂತ್ರಣಕ್ಕೆ ಕಾರ್ಯಾಚರಣೆ

ಪಿಟಿಐ
Published 10 ಜೂನ್ 2025, 13:55 IST
Last Updated 10 ಜೂನ್ 2025, 13:55 IST
<div class="paragraphs"><p>ಹಡಗಿನಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಂದಿಸಲು ಕರಾವಳಿ ಕಾವಲು ಪಡೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು </p></div>

ಹಡಗಿನಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಂದಿಸಲು ಕರಾವಳಿ ಕಾವಲು ಪಡೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು

   

–ಪಿಟಿಐ ಚಿತ್ರ

ಕೊಚ್ಚಿ: ಕೇರಳದ ಕರಾವಳಿಯಲ್ಲಿ ಸರಕು ಸಾಗಣೆ ಹಡಗಿನಲ್ಲಿ ಕಾಣಿಸಿಕೊಂಡ ಬೆಂಕಿಯ ನಿಯಂತ್ರಣಕ್ಕೆ ಕರಾವಳಿ ಕಾವಲು ಪಡೆಯ ಸಿಬ್ಬಂದಿ ಸತತ ಎರಡನೇ ದಿನವಾದ ಮಂಗಳವಾರವೂ ಪ್ರಯತ್ನ ನಡೆಸಿದ್ದಾರೆ.

ADVERTISEMENT

ಸಿಂಗಪುರ ಧ್ವಜ ಹೊಂದಿದ್ದ ‘ಎಂವಿ ವಾನ್ ಹೈ 503’ ಹಡಗಿನಲ್ಲಿ ಸೋಮವಾರ ಬೆಂಕಿ ಕಾಣಿಸಿಕೊಂಡಿತ್ತು. ಹಡಗಿನಲ್ಲಿರುವ ಕಂಟೇನರ್‌ಗಳು ಹೊತ್ತಿ ಉರಿದಿವೆ. ಮಂಗಳವಾರ ಕೂಡಾ ಬೆಂಕಿ ಮುಂದುವರಿದಿದ್ದು, ಕಂಟೇನರ್‌ಗಳಿಂದ ಸ್ಫೋಟದ ಸದ್ದು ಕೇಳಿದೆ ಎಂದು ಕರಾವಳಿ ಕಾವಲು ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

ಹಡಗಿನ ಮುಂಭಾಗದಲ್ಲಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆಯಾದರೂ, ಮಧ್ಯ ಭಾಗದಲ್ಲಿ ಬೆಂಕಿಯ ಜ್ವಾಲೆಗಳು ಮತ್ತು ದಟ್ಟ ಹೊಗೆ ಏಳುತ್ತಲೇ ಇದೆ. ಸಾಲಾಗಿ ಜೋಡಿಸಿಟ್ಟಿದ್ದ ಕಂಟೇನರ್‌ಗಳು ಬೆಂಕಿಯ ಕಾರಣ ಉರುಳಿ ಬಿದ್ದಿವೆ. 

ಬೆಂಕಿ ಇಡೀ ಹಡಗು ವ್ಯಾಪಿಸುವುದನ್ನು ತಡೆಯಲು ಕರಾವಳಿ ಕಾವಲು ಪಡೆಯ ಸಿಬ್ಬಂದಿ, ‘ಸಮುದ್ರ ಪ್ರಹರಿ’ ಮತ್ತು ‘ಸಚೇತ್’ ಹಡಗುಗಳ ನೆರವಿನೊಂದಿಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸಲು ಇನ್ನಷ್ಟು ಸಿಬ್ಬಂದಿಯನ್ನು ಹೊತ್ತ ಸಮರ್ಥ್‌ ನೌಕೆಯು ಕೊಚ್ಚಿಯಿಂದ ಪ್ರಯಾಣ ಬೆಳೆಸಿದೆ.

ಹಡಗಿನಲ್ಲಿದ್ದ 18 ಸಿಬ್ಬಂದಿಯನ್ನು ಐಎನ್‌ಎಸ್‌ ಸೂರತ್‌ ಹಡಗಿನಲ್ಲಿ ಸೋಮವಾರ ರಾತ್ರಿ ಮಂಗಳೂರಿಗೆ ಕರೆತರಲಾಗಿತ್ತು. ಗಾಯಗೊಂಡಿದ್ದ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಡಗಿನಲ್ಲಿದ್ದ ನಾಲ್ವರು ಸಿಬ್ಬಂದಿ ನಾಪತ್ತೆಯಾಗಿದ್ದಾರೆ.

ಕಣ್ಣೂರು ಜಿಲ್ಲೆಯ ಅಳಿಕ್ಕಲ್‌ ತೀರದಿಂದ 44 ನಾಟಿಕಲ್‌ ಮೈಲು ದೂರದಲ್ಲಿ ಸೋಮವಾರ ಬೆಳಿಗ್ಗೆ ಕಂಟೇನರ್‌ ಸ್ಫೋಟಗೊಂಡು ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.