
ಸಾಂದರ್ಭಿಕ ಚಿತ್ರ
ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಮತ್ತೊಬ್ಬ ಸದಸ್ಯ ಹರಪಾಲ್ ಸಿಂಗ್ (34) ಎಂಬಾತನನ್ನು ಬಂಧಿಸಿದ್ದು, ಇಲ್ಲಿನ ನ್ಯಾಯಾಲಯವು ಆತನನ್ನು ಇದೇ 22ರವರೆಗೆ ಮುಂಬೈ ಪೊಲೀಸರ ವಶಕ್ಕೆ ಒಪ್ಪಿಸಿ ಮಂಗಳವಾರ ಆದೇಶಿಸಿದೆ.
ಆರೋಪಿಯು ಹರಿಯಾಣದ ಫತೇಹಾಬಾದ್ ನಿವಾಸಿಯಾಗಿದ್ದು, ಆತನನ್ನು ಮುಂಬೈ ಅಪರಾಧ ವಿಭಾಗದ ಪೊಲೀಸರು ಫತೇಹಾಬಾದ್‌ನಲ್ಲಿ ಸೋಮವಾರ ಬಂಧಿಸಿದ್ದರು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಆರೋಪಿಯನ್ನು ಮುಂಬೈಗೆ ಕರೆತಂದ ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಪೊಲೀಸರು ವಿಚಾರಣೆ ಸಲುವಾಗಿ ಆರೋಪಿಯನ್ನು 14 ದಿನಗಳ ಕಾಲ ತಮ್ಮ ಕಸ್ಟಡಿಗೆ ಕೊಡುವಂತೆ ಕೋರಿದ್ದರು.
ಈ ಪ್ರಕರಣದಲ್ಲಿ ಈಗಾಗಲೇ ಬಂಧಿತನಾಗಿರುವ ಆರೋಪಿಯೊಬ್ಬ ವಿಚಾರಣೆ ಸಂದರ್ಭದಲ್ಲಿ ಹರಪಾಲ್ ಸಿಂಗ್ ಹೆಸರನ್ನು ಹೇಳಿದ್ದಾನೆ ಎಂದು ಪ್ರಾಸಿಕ್ಯೂಷನ್ ತಿಳಿಸಿದೆ. ಈ ಪ್ರಕರಣಕ್ಕ ಸಂಬಂಧಿಸಿದಂತೆ ಇಲ್ಲಿಯವರೆಗೆ ಬಂಧಿತರಾಗಿರುವವರಲ್ಲಿ ಸಿಂಗ್ ಆರನೇ ಆರೋಪಿ.
ಮುಂಬೈನ ಬಾಂದ್ರಾ ಪ್ರದೇಶದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿರುವ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ಏಪ್ರಿಲ್ 14ರಂದು ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಗುಂಡು ಹಾರಿಸಿ ಪರಾರಿಯಾಗಿದ್ದರು.
ಈ ಪ್ರಕರಣದಲ್ಲಿ ಬಂಧಿತನಾಗಿರುವ ಬಿಷ್ಣೋಯಿ ಗ್ಯಾಂಗ್‌ನ ಮತ್ತೊಬ್ಬ ಸದಸ್ಯ ಮೊಹಮ್ಮದ್ ರಫೀಲ್ ಚೌಧರಿ ಎಂಬಾತ ವಿಚಾರಣೆ ಸಮಯದಲ್ಲಿ ಸಿಂಗ್ ಹೆಸರು ಹೇಳಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಖಾನ್ ಅವರ ನಿವಾಸದ ಸುತ್ತಲೂ ಸುತ್ತಾಡುತ್ತಿರುವಂತೆ ಚೌಧರಿ ಅವರಿಗೆ ಸೂಚಿಸಿದ್ದ ಸಿಂಗ್, ಅವರಿಗೆ ₹2–3 ಲಕ್ಷ ಪಾವತಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಏಪ್ರಿಲ್ 14ರಂದು ಗುಂಡಿನ ದಾಳಿ ನಡೆದ 48 ಗಂಟೆಗಳಲ್ಲಿ ಆಪಾದಿತ ಶೂಟರ್‌ಗಳಾದ ಬಿಹಾರ ಮೂಲದ ಸಾಗರ್‌ಪಾಲ್ ಮತ್ತು ವಿಕ್ಕಿ ಗುಪ್ತಾ ಅವರನ್ನು ಪೊಲೀಸರು ಗುಜರಾತಿನಲ್ಲಿ ಬಂಧಿಸಿದ್ದರು. ಈ ಶೂಟರ್‌ಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದ ಸೋನು ಬಿಷ್ಣೋಯ್ ಮತ್ತು ಅನುಜ್ ಥಾಪನ್ ಎಂಬುವರನ್ನು ಪಂಜಾಬಿನಲ್ಲಿ ಬಂಧಿಸಲಾಗಿತ್ತು.
ಮೇ 1ರಂದು ಪೊಲೀಸ್ ಲಾಕಪ್‌ನಲ್ಲಿ ಥಾಪನ್ ನೇಣು ಹಾಕಿಕೊಂಡು ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.