ADVERTISEMENT

ಹೈದರಾಬಾದ್‌ ತಲುಪಿದ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ

ಭಾರತಕ್ಕೆ ಬಂದ ಮೂರನೇ ಲಸಿಕೆ

​ಪ್ರಜಾವಾಣಿ ವಾರ್ತೆ
Published 1 ಮೇ 2021, 16:05 IST
Last Updated 1 ಮೇ 2021, 16:05 IST
ರಷ್ಯಾದ ಸ್ಪಟ್ನಿಕ್ ವಿ ಕೋವಿಡ್ ಲಸಿಕೆ
ರಷ್ಯಾದ ಸ್ಪಟ್ನಿಕ್ ವಿ ಕೋವಿಡ್ ಲಸಿಕೆ   

ಹೈದರಾಬಾದ್: ‘ಕೋವಿಡ್‌–19 ವಿರುದ್ಧ ಹೋರಾಡುವ ರಷ್ಯಾ ನಿರ್ಮಿತ ಸ್ಪುಟ್ನಿಕ್ ವಿ ಲಸಿಕೆಯ 1.5 ಲಕ್ಷ ಡೋಸ್‌ಗಳು ಭಾರತಕ್ಕೆ ಬಂದಿವೆ’ ಎಂದು ಈ ಲಸಿಕೆಯ ಉಸ್ತುವಾರಿ ವಹಿಸಿರುವ ಭಾರತದ ರೆಡ್ಡೀಸ್ ಲ್ಯಾಬೊರೇಟರೀಸ್ (ಡಿಆರ್‌ಎಲ್) ಶನಿವಾರ ಹೇಳಿದೆ.

ಭಾರತದಲ್ಲಿ ಈ ಲಸಿಕೆಯ ಬಳಕೆಗಾಗಿ ಡಿಆರ್‌ಎಲ್ ರಷ್ಯಾದಿಂದ 250 ಮಿಲಿಯನ್ ಡೋಸ್‌ಗಳನ್ನು ಆಮದು ಮಾಡಿಕೊಳ್ಳಲಿದೆ. ಇದರ ಮೊದಲ ಭಾಗವಾಗಿ ಶನಿವಾರ 1.5 ಲಕ್ಷ ಡೋಸ್‌ಗಳು ಭಾರತಕ್ಕೆ ತಲುಪಿವೆ. ಮುಂದಿನ ಕೆಲವು ವಾರಗಳಲ್ಲಿ ಉಳಿದ ಡೋಸ್‌ಗಳು ಬರಲಿವೆ ಎಂದು ರೆಡ್ಡೀಸ್ ಲ್ಯಾಬೊರೇಟರಿಸ್ ತಿಳಿಸಿದೆ.

‘ಈಗ ಬಂದಿರುವ ಲಸಿಕೆಗಳನ್ನು ದೊಡ್ಡಮಟ್ಟದ ಲಸಿಕಾ ಕಾರ್ಯಕ್ರಮದ ಭಾಗವಾಗಿ ನಮ್ಮ ಪೂರೈಕೆಯ ವಿವಿಧ ಜಾಲಗಳಲ್ಲಿ ಬಳಸಲಾಗುತ್ತದೆ’ ಎಂದು ಡಿಆರ್‌ಎಲ್ ಸಿಇಒ (ಎಪಿಐ ಮತ್ತು ಸೇವೆ) ದೀಪಕ್ ಸಪ್ರಾ ತಿಳಿಸಿದ್ದಾರೆ.

ADVERTISEMENT

‘ರಷ್ಯಾ ತಯಾರಿಸಿರುವ ಸ್ಪುಟ್ನಿಕ್ ವಿ ಲಸಿಕೆಯ ಎರಡು ಡೋಸ್‌ಗಳು ಕೋವಿಡ್ ವಿರುದ್ಧ ಶೇ 91.6ರಷ್ಟು ಪರಿಣಾಮಕಾರಿ ಕಾರ್ಯ ನಿರ್ವಹಿಸುತ್ತದೆ’ ಎಂದು ‘ದಿ ಲ್ಯಾನ್ಸೆಟ್‌’ ಪತ್ರಿಕಾ ವರದಿಯು ತಿಳಿಸಿದೆ.

ಭಾರತದಲ್ಲಿ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳ ಕೊರತೆಯ ಕಾರಣಕ್ಕಾಗಿ, ಸ್ಪುಟ್ನಿಕ್ ವಿ ಲಸಿಕೆಯನ್ನು ದೇಶದಲ್ಲಿ ತುರ್ತು ಬಳಕೆಗಾಗಿ ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ ಅವರು ಕಳೆದ ತಿಂಗಳು ಅನುಮೋದನೆ ನೀಡಿದ್ದಾರೆ.

ಈ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ರಷ್ಯಾದ ನೇರ ಹೂಡಿಕೆ ನಿಧಿಯೊಂದಿಗೆ ಸೆಪ್ಟೆಂಬರ್‌ನಲ್ಲಿಯೇ ಡಿಆರ್‌ಎಲ್ ಒಪ್ಪಂದ ಮಾಡಿಕೊಂಡಿತ್ತು. ಡಿಆರ್‌ಎಲ್ ಇನ್ನು ಕೆಲವೇ ತಿಂಗಳುಗಳಲ್ಲಿ ಈ ಲಸಿಕೆಯನ್ನು ಭಾರತದೊಳಗೇ ಉತ್ಪಾದಿಸಿ ಮಾರಾಟ ಮಾಡಲಿದೆ. ಸ್ಪುಟ್ನಿಕ್ ಲಸಿಕೆಯನ್ನುಮೈನಸ್ 18ರಿಂದ ಮೈನಸ್ 22 ಡಿಗ್ರಿ ತಾಪಮಾನದಲ್ಲಿ ಸಂಗ್ರಹಿಸಿಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.