ADVERTISEMENT

ಮೊದಲು ಅಭಿಷೇಕ್‌ ವಿರುದ್ಧ ಸ್ಪರ್ಧಿಸಿ, ನಂತರ ನನ್ನ ವಿರುದ್ಧ ಹೋರಾಡಿ: ಶಾಗೆ ದೀದಿ

ಅಮಿತ್‌ ಶಾಗೆ ಮಮತಾ ಬ್ಯಾನರ್ಜಿ ಸವಾಲು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 19:05 IST
Last Updated 18 ಫೆಬ್ರುವರಿ 2021, 19:05 IST
ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಮಮತಾ ಬ್ಯಾನರ್ಜಿ ಸೋದರಳಿಯ ಅಭಿಷೇಕ್‌, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಮಮತಾ ಬ್ಯಾನರ್ಜಿ ಸೋದರಳಿಯ ಅಭಿಷೇಕ್‌, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ    

ಪೈಲಾನ್ (ಪಶ್ಚಿಮಬಂಗಾಳ):ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ‘ದೀದಿ-ಭಾಯಿಪೋ’ ಹೇಳಿಕೆಗೆ ಪ್ರತ್ಯುತ್ತರ ನೀಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ‘ಮೊದಲು ನನ್ನ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿ, ನಂತರ ನನ್ನ ವಿರುದ್ಧ ಹೋರಾಡುವ ಬಗ್ಗೆ ಯೋಚಿಸುವಿರಂತೆ’ ಎಂದು ಸವಾಲು ಹಾಕಿದ್ದಾರೆ.

ದಕ್ಷಿಣ 24 ಪರಗಣ ಜಿಲ್ಲೆಯ ಪೈಲಾನ್‌ನಲ್ಲಿ ಪಕ್ಷದ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಅಭಿಷೇಕ್ ಸಂಸದರಾಗಲುರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗುವ ಸುಲಭ ಮಾರ್ಗ ಹಿಡಿಯಬಹುದಿತ್ತು. ಆದರೆ ಅವರು ಹಾಗೆ ಮಾಡದೇ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಜನಾದೇಶ ಪಡೆದಿದ್ದಾರೆ ಎಂದರು.

‘ಅವರೆಲ್ಲರೂ ಹಗಲು ರಾತ್ರಿ ದೀದಿ-ಸಂಬಂಧಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ಮೊದಲು ಅಭಿಷೇಕ್ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸಿ, ನಂತರ ನನ್ನ ಬಗ್ಗೆ ಯೋಚಿಸಿ ಎಂದು ಅಮಿತ್ ಶಾ ಅವರಿಗೆ ನಾನು ಸವಾಲು ಹಾಕುವೆ’ ಎಂದು ಮಮತಾ ತಿರುಗೇಟು ನೀಡಿದ್ದಾರೆ.

ADVERTISEMENT

ಶಾ ವಿರುದ್ಧ ನೇರ ವಾಗ್ದಾಳಿ ನಡೆಸಿದ ಮಮತಾ, ‘ನಿಮ್ಮ ಮಗ ಹೇಗೆ ಕ್ರಿಕೆಟ್ ಆಡಳಿತದ ಭಾಗವಾದರು ಮತ್ತು ನೂರಾರು ಕೋಟಿ ರೂಪಾಯಿಗಳನ್ನು ಹೇಗೆ ಸಂಪಾದಿಸಿದರು?’ ಎಂದು ಪ್ರಶ್ನಿಸಿದರು.

ಮುಂಬರುವ ಚುನಾವಣೆಯಲ್ಲಿ ತಮ್ಮ ಪಕ್ಷವು ಹಿಂದಿನ ಚುನಾವಣೆಯ ಎಲ್ಲಾ ದಾಖಲೆಗಳನ್ನು ಮುರಿಯಲಿದೆ. ಅತಿ ಹೆಚ್ಚಿನ ಮತಗಳನ್ನು ಪಡೆಯುವ ಜತೆಗೆ, ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಮಮತಾ ಬ್ಯಾನರ್ಜಿ ವಿಶ್ವಾಸ ವ್ಯಕ್ತಪಡಿಸಿದರು.

ಅಮಿತ್ ಶಾ ಸೇರಿದಂತೆ ಬಿಜೆಪಿಯಹಲವು ನಾಯಕರು, ಮಮತಾ ಬ್ಯಾನರ್ಜಿ ಕುಟುಂಬ ರಾಜಕಾರಣ ಮಾಡುತ್ತಿದ್ದು, ಸೋದರಳಿಯನಿಗೆ (‘ಭಾಯಿಪೋ’) ಆದ್ಯತೆ ನೀಡುತ್ತಿದ್ದಾರೆ. ಅಂತಿಮವಾಗಿ ಅವರನ್ನೇ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡುತ್ತಾರೆ ಎಂದು ದೂರುತ್ತಿದ್ದಾರೆ.

‘ಪ್ರವಾಸಿ ನಕ್ಷೆಗೆ ಗಂಗಾಸಾಗರ್ ಸೇರ್ಪಡೆ’
ಗಂಗಾಸಾಗರ್ (ಪಶ್ಚಿಮಬಂಗಾಳ):
‘ಮುಂಬರುವ ವಿಧಾನಸಭಾ ಚುನಾವಣೆಯ ನಂತರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಆಡಳಿತ ರಚಿಸುವ ಸಂಪೂರ್ಣ ನಂಬಿಕೆ ಇದೆ. ಆಗ ಗಂಗಾಸಾಗರ ಮೇಳ ಅಂತರರಾಷ್ಟ್ರೀಯ ಪ್ರವಾಸಿ ನಕ್ಷೆಗೂ ಸೇರಲಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಕಪಿಲಮುನಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಕೇಂದ್ರದ ಎಲ್ಲ ಪ್ರವಾಸೋದ್ಯಮ ಯೋಜನೆಗಳನ್ನು ಇಲ್ಲಿ ಯಶಸ್ವಿಯಾಗಿ ಜಾರಿಗೊಳಿಸಲಾಗುವುದು. ಗಂಗಾ ನದಿ ಸ್ವಚ್ಛಗೊಳಿಸುವ ‘ನವಾಮಿ ಗಂಗೆ’ಯನ್ನು ರಾಜ್ಯದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಗಂಗಾಸಾಗರ ವೇಳವನ್ನು ಅಂತರ ರಾಷ್ಟ್ರೀಯ ಪ್ರವಾಸಿ ನಕ್ಷೆಗೆ ಸೇರಿಸಲಾಗುವುದು ಎಂದು ಶಾ ಹೇಳಿದರು.

‘ಟಿಎಂಸಿ ಸರ್ಕಾರ ಪಶ್ಚಿಮ ಬಂಗಾಳದಲ್ಲಿ ‘ಕಟ್-ಮನಿ’ (ಹಣ ಕಡಿತ) ಸಂಸ್ಕೃತಿ ಪರಿಚಯಿಸಿದೆ. ಜನತೆ ಬಿಜೆಪಿಗೆ ಅಧಿಕಾರ ನೀಡಿದರೆ, ಈ ಸಂಸ್ಕೃತಿ ಕೊನೆಗಾಣಿಸಿ, ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಾಗುವುದು’ ಎಂದು ಕಾಕ್‌ದ್ವೀಪ್‌ನಲ್ಲಿ ಪರಿವರ್ತನಾ ರ‍್ಯಾಲಿಯಲ್ಲಿ ಶಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.