ಭೋಪಾಲ್: ‘ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಜನಿಸಿದ 16 ಚೀತಾ ಮರಿಗಳ ಪೈಕಿ ಒಂದು ಮರಿಯು ಪ್ರೌಢಾವಸ್ಥೆಗೆ ತಲುಪಿದೆ. ಇದರಿಂದಾಗಿ ಚೀತಾಗಳನ್ನು ಮರುಪರಿಚಯಿಸುವ ಮೂರು ವರ್ಷಗಳ ಹಿಂದಿನ ಪ್ರಯತ್ನಕ್ಕೆ ಯಶಸ್ಸು ಸಿಗುವ ವಿಶ್ವಾಸ ಮೂಡಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2023ರ ಮಾರ್ಚ್ 29ರಂದು ನಮೀಬಿಯಾದಿಂದ ತರಿಸಿದ್ದ ‘ಜ್ವಾಲಾ’ ಚೀತಾಕ್ಕೆ ಜನಿಸಿದ ‘ಮುಖಿ’ ಮರಿಯು ಪ್ರೌಢಾವಸ್ಥೆಗೆ ತಲುಪಿದೆ. ಸೋಮವಾರದ ವೇಳೆಗೆ ಮರಿ ಜನಿಸಿ, 915 ದಿನಗಳು ಅಥವಾ 30 ತಿಂಗಳು ಪೂರ್ಣವಾಗಲಿದೆ. ಇದರಿಂದ ಭಾರತದಲ್ಲಿ ಚೀತಾಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಕಾಣಿಸುತ್ತಿದೆ’ ಎಂದು ‘ಪ್ರಾಜೆಕ್ಟ್ ಚೀತಾ’ದ ನಿರ್ದೇಶಕ ಉತ್ತಮ್ ಕುಮಾರ್ ಶರ್ಮಾ ಅವರು ತಿಳಿಸಿದ್ದಾರೆ.
‘ಜ್ವಾಲಾ ಜನ್ಮ ನೀಡಿದ್ದ ನಾಲ್ಕು ಮರಿಗಳ ಪೈಕಿ ಮೂರು ಮರಿಗಳು ವಿಪರೀತ ತಾಪಮಾನದಿಂದಾಗಿ ಮೃತಪಟ್ಟಿದ್ದವು. ಮುಖಿ ಬದುಕುಳಿದು, ಚೆನ್ನಾಗಿ ಬೆಳೆದಿದೆ. ನಮ್ಮ ಪ್ರಯತ್ನಗಳು ಫಲವಾಗಿ ಪರಿವರ್ತನೆಯಾಗುತ್ತಿವೆ’ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.
‘ಸದ್ಯ ಭಾರತದಲ್ಲಿ 27 ಚೀತಾಗಳಿದ್ದು, 16 ಭಾರತದಲ್ಲಿಯೇ ಜನಿಸಿವೆ. ಈ ಪೈಕಿ 25 ಕುನೊದಲ್ಲಿ ಇದ್ದು, ಉಳಿದ ಮೂರು ಗಾಂಧಿ ಸಾಗರ್ ವನ್ಯಜೀವಿ ಅಭಯಾರಣ್ಯದಲ್ಲಿವೆ’ ಎಂದು ಶರ್ಮಾ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.