ADVERTISEMENT

ಮಿತಿ ಮೀರಿದ ವಿತ್ತೀಯ ಕೊರತೆ

ಆರ್ಥಿಕತೆಯ ಮೇಲೆ ಲಾಕ್‌ಡೌನ್‌ ಪರಿಣಾಮ: ಸರ್ಕಾರದ ವರಮಾನ ಸಂಗ್ರಹಕ್ಕೆ ಅಡ್ಡಿ

ಪಿಟಿಐ
Published 31 ಆಗಸ್ಟ್ 2020, 18:54 IST
Last Updated 31 ಆಗಸ್ಟ್ 2020, 18:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಲಾಕ್‌ಡೌನ್‌ನಿಂದಾಗಿ ಸರ್ಕಾರದ ವರಮಾನ ಸಂಗ್ರಹಕ್ಕೆ ಪೆಟ್ಟು ಬಿದ್ದಿದೆ. ಇದರಿಂದಾಗಿ ನಾಲ್ಕು ತಿಂಗಳಿನಲ್ಲಿಯೇ (ಏಪ್ರಿಲ್‌–ಜೂನ್‌) ವಿತ್ತೀಯ ಕೊರತೆಯು ಬಜೆಟ್‌ ಅಂದಾಜನ್ನೂ ಮೀರಿದೆ.

ಪ್ರಸಕ್ತ ಹಣಕಾಸು ವರ್ಷಕ್ಕೆ ವಿತ್ತೀಯ ಕೊರತೆ ₹ 7.96 ಲಕ್ಷ ಕೋಟಿ (ಶೇ 3.5) ಇರುವ ಅಂದಾಜು ಮಾಡಲಾಗಿದೆ. ಆದರೆ, ನಾಲ್ಕು ತಿಂಗಳಿನಲ್ಲಿಯೇ ಅದು ₹ 8.21 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ಮಹಾಲೇಖಪಾಲರ ವರದಿ ತಿಳಿಸಿದೆ.

ಸರ್ಕಾರದ ವರಮಾನ ಮತ್ತು ವೆಚ್ಚದ ನಡುವಣ ಅಂತರವನ್ನು ವಿತ್ತೀಯ ಕೊರತೆ ಎನ್ನಲಾಗುತ್ತದೆ.

ADVERTISEMENT

ವಿತ್ತೀಯ ಕೊರತೆಯನ್ನು ಪ್ರಮಾಣದಲ್ಲಿ ಹೇಳುವುದಾದರೆ ಶೇ 103.1ರಷ್ಟಾಗಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಶೇ 77.8ರಷ್ಟಾಗಿತ್ತು.

ಕೋವಿಡ್‌ನಿಂದ ಆರ್ಥಿಕತೆಯ ಮೇಲೆ ಆಗಿರುವ ಪರಿಣಾಮವನ್ನು ಗಮನದಲ್ಲಿ ಇಟ್ಟುಕೊಂಡು ಈ ಅಂಕಿ–ಅಂಶ ಪರಿಷ್ಕರಣೆ ಆಗಲಿದೆ. 2019–20ರಲ್ಲಿ ವಿತ್ತೀಯ ಕೊರತೆ ಏಳು ವರ್ಷಗಳ ಗರಿಷ್ಠ ಮಟ್ಟವಾದ ಶೇ 4.6ಕ್ಕೆ ಏರಿಕೆಯಾಗಿತ್ತು.

ತೆರಿಗೆ ವರಮಾನ ₹ 2.02 ಲಕ್ಷ ಕೋಟಿ ಆಗಿದ್ದು, ಬಜೆಟ್‌ ಅಂದಾಜಿನ ಶೇ 12.4ರಷ್ಟಿದೆ. ಹಿಂದಿನ ಹಣಕಾಸು ವರ್ಷದ ನಾಲ್ಕು ತಿಂಗಳಿನಲ್ಲಿ ಇದು ಬಜೆಟ್‌ ಅಂದಾಜಿನ ಶೇ 20.5ರಷ್ಟಿತ್ತು.

ಸರ್ಕಾರದ ಒಟ್ಟಾರೆ ವೆಚ್ಚ ₹ 10.54 ಲಕ್ಷ ಕೋಟಿಗಳಷ್ಟಾಗಿದ್ದು, ಇದು ಬಜೆಟ್‌ ಅಂದಾಜಿನ ಶೇ 34.7ರಷ್ಟಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಬಜೆಟ್‌ ಅಂದಾಜಿನ ಶೇ 34ರಷ್ಟಿತ್ತು.

ಚೇತರಿಸಿಕೊಳ್ಳದ ಮೂಲಸೌಕರ್ಯ

ದೇಶದ ಮೂಲಸೌಕರ್ಯ ವಲಯದ ಬೆಳವಣಿಗೆ ಸತತ ಐದನೇ ತಿಂಗಳಿನಲ್ಲಿಯೂ ಇಳಿಮುಖವಾಗಿಯೇ ಇದೆ.

ಉಕ್ಕು, ತೈಲ ಸಂಸ್ಕರಣೆ ಮತ್ತು ಸಿಮೆಂಟ್‌ ಉತ್ಪಾದನೆಯಲ್ಲಿ ಹೆಚ್ಚು ಇಳಿಕೆ ಆಗಿರುವುದರಿಂದ 8 ಮೂಲಸೌಕರ್ಯ ವಲಯಗಳ ಬೆಳವಣಿಗೆಯು ಜುಲೈನಲ್ಲಿ ಶೇ 9.6ರಷ್ಟು ಇಳಿಕೆ ಕಂಡಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಾಹಿತಿ ನೀಡಿದೆ.

ರಸಗೊಬ್ಬರ ವಲಯವನ್ನು ಹೊರತುಪಡಿಸಿ, ಕಲ್ಲಿದ್ದಲು, ಕಚ್ಚಾತೈಲ, ನೈಸರ್ಗಿಕ ಅನಿಲ, ತೈಲ ಸಂಸ್ಕರಣೆ, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್‌ ವಲಯಗಳು ನಕಾರಾತ್ಮಕ ಬೆಳವಣಿಗೆ ಕಂಡಿವೆ.

2020–21ರಲ್ಲಿ ಏಪ್ರಿಲ್‌–ಜುಲೈ ಅವಧಿಯಲ್ಲಿನ ಬೆಳವಣಿಗೆಯೂ ಶೇ 20.5ರಷ್ಟು ಇಳಿಕೆಯಾಗಿದೆ. 2019–20ರಲ್ಲಿ ಶೇ 3.2ರಷ್ಟು ಬೆಳವಣಿಗೆ ಆಗಿತ್ತು.

ಹಣದ ಹರಿವಿಗೆ ಆರ್‌ಬಿಐ ಕ್ರಮ

ಮುಂಬೈ: ದೇಶದ ಆರ್ಥಿಕ ಬೆಳವಣಿಗೆಯು ಸುಸ್ಥಿರವಾಗಿ ಚೇತರಿಸಿಕೊಳ್ಳುವಂತೆ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಹಲವು ಕ್ರಮಗಳನ್ನು ಘೋಷಿಸಿದೆ.

ನಗದು ಹರಿವಿನ ಮೇಲಿನ ಒತ್ತಡ ತಗ್ಗಿಸಲು ಹಾಗೂ ಹಣಕಾಸು ಸ್ಥಿತಿಯನ್ನು ಸರಿಪಡಿಸಲು ಅಲ್ಪಾವಧಿಗೆ ಬದಲಾಗುವ ಬಡ್ಡಿದರದಲ್ಲಿ ಬ್ಯಾಂಕಿಂಗ್‌ ವ್ಯವಸ್ಥೆಗೆ ಸೆಪ್ಟೆಂಬರ್‌ ಮಧ್ಯಭಾಗದಲ್ಲಿ ₹ 1 ಲಕ್ಷ ಕೋಟಿ ನೀಡುವುದಾಗಿ ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ತಿಳಿಸಿದ್ದಾರೆ.

ನಿಧಿಗಳ ಮೇಲಿನ ವೆಚ್ಚವನ್ನು ತಗ್ಗಿಸಲು ಬ್ಯಾಂಕ್‌ಗಳು ಆರ್‌ಬಿಐನಿಂದ ದೀರ್ಘಾವಧಿಗೆ ಪಡೆಯುವ ಸಾಲವನ್ನು (ಎಲ್‌ಟಿಆರ್‌ಒ) ಅವಧಿಗೂ ಮುನ್ನವೇ ಹಿಂದಿರುಗಿಸುವ ಅವಕಾಶ ನೀಡಿದೆ. ರೆಪೊ ದರ ಶೇ 5.15ರಷ್ಟು ಇದ್ದಾಗ ಪಡೆದಿದ್ದ ಸಾಲವನ್ನು ಆರ್‌ಬಿಐಗೆ ಹಿಂದಿರುಗಿಸಿ, ಸದ್ಯ ಇರುವ ಶೇ 4ರ ರೆಪೊ ದರದಲ್ಲಿ ಸಾಲ ಪಡೆಯಲು ಬ್ಯಾಂಕ್‌ಗಳಿಗೆ ಅವಕಾಶ ಕಲ್ಪಿಸಿದೆ. ಇದರಿಂದಾಗಿ ಬ್ಯಾಂಕ್‌ಗಳು ಆರ್‌ಬಿಐಗೆ ನೀಡಬೇಕಿರುವ ಸಾಲದ ಬಡ್ಡಿದರ ಕಡಿಮೆಯಾಗಲಿದೆ.ಆರ್‌ಬಿಐ, ವಿಶೇಷ ಮುಕ್ತ ಮಾರುಕಟ್ಟೆ ಕಾರ್ಯಾಚರಣೆ ಕೈಗೊಳ್ಳಲಿದೆ. ಆ ಮೂಲಕ ಎರಡು ಕಂತುಗಳಲ್ಲಿ ₹ 20 ಸಾವಿರ ಕೋಟಿ ಮೊತ್ತದ ಸರ್ಕಾರಿ ಸಾಲಪತ್ರಗಳನ್ನು ಮಾರಾಟ ಮಾಡುವ ಮತ್ತು ಖರೀದಿಸುವ ಪ್ರಕ್ರಿಯೆ ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.