ADVERTISEMENT

ಮೀನುಗಳ ಮಾರಣಹೋಮ: ಬಿಬಿಎಂಪಿ, ಪಿಸಿಬಿಗೆ ಎನ್‌ಜಿಟಿ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 31 ಮೇ 2024, 18:25 IST
Last Updated 31 ಮೇ 2024, 18:25 IST
ಎನ್‌ಜಿಟಿ
ಎನ್‌ಜಿಟಿ   

ನವದೆಹಲಿ: ಬೆಂಗಳೂರಿನ ವಿವಿಧ ಕೆರೆಗಳಲ್ಲಿ ಮೀನುಗಳು ಮೃತಪಟ್ಟಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (ಪಿಸಿಬಿ) ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೋಟಿಸ್‌ ಜಾರಿಗೊಳಿಸಿದೆ.

ನಗರದ ವಿವಿಧ ಕೆರೆಗಳಲ್ಲಿ ಹಲವಾರು ಮೀನುಗಳ ಮಾರಣಹೋಮಕ್ಕೆ ಸಂಬಂಧಿಸಿದಂತೆ ಮಾಧ್ಯಮ ವರದಿಗಳನ್ನು ಆಧರಿಸಿ ಎನ್‌ಜಿಟಿ ಅಧ್ಯಕ್ಷರಾದ ನ್ಯಾಯಮೂರ್ತಿ ಪ್ರಕಾಶ್‌ ಶ್ರೀವಾಸ್ತವ ನೇತೃತ್ವದ ಪ್ರಧಾನ ಪೀಠವು ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿತು.

ಮಾಧ್ಯಮ ವರದಿಗಳ ಪ್ರಕಾರ, 2017ರಿಂದ 2023ರ ನಡುವೆ ಬೆಂಗಳೂರಿನಲ್ಲಿ ಮೀನುಗಳ ಮಾರಣಹೋಮ ಸಂಭವಿಸಿರುವ 61 ಪ್ರಕರಣಗಳು ನಡೆದಿವೆ. ಭಟ್ಟರಹಳ್ಳಿ, ಮುನ್ನೇಕೋಳಲ, ಚೇಳಕೆರೆ ಮತ್ತು ಇಬ್ಬಲೂರು ಕೆರೆಗಳಲ್ಲಿ ವಿಶೇಷವಾಗಿ ಒಳಚರಂಡಿ ಸಂಸ್ಕರಣ ಘಟಕಗಳಿದ್ದರೂ ಮೀನುಗಳು ಮೃತಪಟ್ಟಿವೆ ಎಂಬುದು ವಿಶ್ಲೇಷಣೆಯಿಂದ ಗೊತ್ತಾಗಿದೆ ಎಂದು ಎನ್‌ಜಿಟಿ ಹೇಳಿದೆ.

ADVERTISEMENT

2023ರಲ್ಲಿ 15 ಕೆರೆಗಳಲ್ಲಿ ಒಟ್ಟು 20 ಬಾರಿ ಮೀನುಗಳು ಮೃತಪಟ್ಟ ವರದಿಯಾಗಿವೆ. ಕೊತ್ತನೂರು, ಕುಂದಲಹಳ್ಳಿ, ಭಟ್ಟರಹಳ್ಳಿ ಕೆರೆಗಳಲ್ಲಿ ಈ ರೀತಿಯ ಘಟನೆಗಳು ಪುನರಾವರ್ತನೆಯಾಗಿವೆ. ಕೆರೆಗೆ ಚರಂಡಿ ನೀರು ಸೇರುತ್ತಿರುವುದು ಈ ಘಟನೆಗಳಿಗೆ ಕಾರಣ ಎಂಬುದನ್ನು ನೀರಿನ ಗುಣಮಟ್ಟದ ಪರೀಕ್ಷೆಗಳು ದೃಢಪಡಿಸಿವೆ.

ಈ ಕೆರೆಗಳು ಯುಜಿಡಿ ಸಂಪರ್ಕವಿಲ್ಲದ 110 ಹಳ್ಳಿಗಳ ಸುತ್ತಲೂ ನೆಲೆಗೊಂಡಿವೆ ಎಂದು ಮಾಧ್ಯಮ ವರದಿಗಳು ಹೇಳುತ್ತವೆ. ಸಂಸ್ಕರಣೆ ಮಾಡದ ಕೊಳಚೆ ನೀರು ಈ ಕೆರೆಗಳನ್ನು ಸೇರುತ್ತಿರುವುದರಿಂದ ಮೀನುಗಳು ಸಾಯುತ್ತಿವೆ ಎನ್ನಲಾಗಿದೆ.

ಮೀನುಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಬೆಂಗಳೂರಿನ ಜಿಲ್ಲಾಧಿಕಾರಿಗೂ ನೋಟಿಸ್‌ ಜಾರಿ ಮಾಡಲಾಗಿದೆ. ಪ್ರಕರಣವನ್ನು ಎನ್‌ಜಿಟಿಯ ದಕ್ಷಿಣ ವಲಯ ಪೀಠಕ್ಕೆ ವರ್ಗಾಯಿಸಲಾಗಿದ್ದು, ಮುಂದಿನ ವಿಚಾರಣೆ ಜುಲೈ 26ರಂದು ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.