ಬಂಧನ ( ಸಾಂಕೇತಿಕ ಚಿತ್ರ)
ಕೋಲ್ಕತ್ತ: ಆದಾಯ ತೆರಿಗೆ (ಐಟಿ) ಅಧಿಕಾರಿಗಳ ಸೋಗಿನಲ್ಲಿ ದಾಳಿ ನಡೆಸಿ ದರೋಡೆ ಮಾಡಿದ ಆರೋಪದ ಮೇಲೆ ಐವರು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾರ್ಚ್ 18ರಂದು ಬೆಳಿಗ್ಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಂತೆ ನಟಿಸಿ ತಂಡವೊಂದು ಚಿನಾರ್ ಪಾರ್ಕ್ ಪ್ರದೇಶದಲ್ಲಿ ಮಗಳೊಂದಿಗೆ ವಾಸಿಸುತ್ತಿರುವ ವಿನಿತಾ ಸಿಂಗ್ ಅವರ ನಿವಾಸದ ಮೇಲೆ ದಾಳಿ ನಡೆಸಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿ ಕುರಿತು ಅನುಮಾನ ಮೂಡಿದ್ದು, ವಿನಿತಾ ಅವರು ಬಾಗುಹಾಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದರೋಡೆಕೋರರು ₹3 ಲಕ್ಷ ನಗದು, ₹25 ಲಕ್ಷ ಮೌಲ್ಯದ ಆಭರಣಗಳು ಮತ್ತು ಸಿಸಿಟಿವಿ ಕ್ಯಾಮೆರಾಗಳಿಗೆ ಲಿಂಕ್ ಮಾಡಲಾದ ಡಿಜಿಟಲ್ ವಿಡಿಯೊ ರೆಕಾರ್ಡರ್ (ಡಿವಿಆರ್) ಅನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು ಎಂದು ಅವರು ಹೇಳಿದ್ದಾರೆ.
ದೂರಿನಯ್ವಯ ಪೊಲೀಸರು ತನಿಖೆ ಆರಂಭಿಸಿ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ವಿಚಾರಣೆ ನಡೆಸಿದರು. ತನಿಖೆ ಆರಂಭದಲ್ಲಿ ಕೋಲ್ಕತ್ತದಲ್ಲಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಯಿತು. ಬಳಿಕ ಮುರ್ಷಿದಾಬಾದ್ ಜಿಲ್ಲೆಯ ಫರಕ್ಕಾದಲ್ಲಿ ಸಿಐಎಸ್‌ಎಫ್ ಸಿಬ್ಬಂದಿಯನ್ನು ಪತ್ತೆಹಚ್ಚಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪರಾಧದಲ್ಲಿ ಭಾಗಿಯಾಗಿರುವ ಇತರ ಶಂಕಿತರಿಗಾಗಿ ಪೊಲೀಸರು ಇನ್ನೂ ಶೋಧ ನಡೆಸುತ್ತಿದ್ದಾರೆ. ವಿನಿತಾ ಅವರ ತಂದೆಯ ಮರಣದ ನಂತರ ವಿನಿತಾ ಸಿಂಗ್ ಮತ್ತು ಆಕೆಯ ಮಲತಾಯಿ ಆರತಿ ಸಿಂಗ್ ನಡುವೆ ಆಸ್ತಿ ವಿವಾದವಿತ್ತು ಎಂದು ತಿಳಿದುಬಂದಿದೆ. ಬಂಧಿತ ಸಿಐಎಸ್‌ಎಫ್ ಇನ್‌ಸ್ಪೆಕ್ಟರ್ ಜೊತೆ ಆರತಿ ಸಂಪರ್ಕ ಹೊಂದಿದ್ದು, ದರೋಡೆ ನಡೆಸಲು ಅವರನ್ನು ಸಂಪರ್ಕಿಸಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಆರತಿ ಸಿಂಗ್ ಅವರನ್ನು ಕೂಡ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.