ADVERTISEMENT

ತೆಲಂಗಾಣದಲ್ಲಿ ಧಾರಾಕಾರ ಮಳೆ: ಐವರು ಸಾವು

ಪಿಟಿಐ
Published 23 ಜುಲೈ 2022, 6:10 IST
Last Updated 23 ಜುಲೈ 2022, 6:10 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹೈದರಾಬಾದ್: ತೆಲಂಗಾಣದಲ್ಲಿ ಮಳೆ ಸಂಬಂಧಿತ ಕಾರಣಗಳಿಂದಾಗಿ ಐವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಹಳೇ ಕಟ್ಟಡವೊಂದು ಪಕ್ಕದಲ್ಲಿದ್ದ ಗುಡಿಸಲಿನ ಮೇಲೆ ಶುಕ್ರವಾರ ರಾತ್ರಿ ಕುಸಿದು ಬಿದ್ದಿದೆ. ಇದರಿಂದಾಗಿ ಇಬ್ಬರು ಮೃತಪಟ್ಟಿದ್ದು, ಒಬ್ಬರು ಗಾಯಗೊಂಡಿದ್ದಾರೆ.ಕಟ್ಟಡ ಕುಸಿದ ಸಂದರ್ಭದಲ್ಲಿ ಅದರಲ್ಲಿ ಯಾರೂ ಇರಲಿಲ್ಲ ಎಂದು ವಾರಂಗಲ್‌ ಪೊಲೀಸ್‌ ಕಮಿಷನರ್‌ ತರುಣ್‌ ಜೋಶಿ ಹೇಳಿದ್ದಾರೆ.

ಮೇದಕ್‌ ಜಿಲ್ಲೆಯ ಚೇಗುಂಟಾದಲ್ಲಿಶನಿವಾರ ನಸುಕಿನಲ್ಲಿ ಕಾರ್ಖಾನೆಯ ಕಾಂಪೌಂಡ್ ಕುಸಿದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದೇ ವೇಳೆ ಗಾಯಗೊಂಡಿದ್ದಮತ್ತಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲೆಯ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ADVERTISEMENT

ನರಸಿಂಗಿ-ವಲ್ಲಭಾಪುರ ಜಂಕ್ಷನ್‌ನಲ್ಲಿ ನೀರು ನಿಂತಿದ್ದರಿಂದ ಬೈಕ್‌ವೊಂದು ಸ್ಕಿಡ್‌ ಆಗಿ ಬಿದ್ದಿದೆ. ಈ ವೇಳೆ ಸವಾರನ ತಲೆ ರಸ್ತೆ ವಿಭಜಕಕ್ಕೆ ಬಡಿದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೈದರಾಬಾದ್‌ ಸೇರಿದಂತೆರಾಜ್ಯದ ಹಲವು ಪ್ರದೇಶಗಳಲ್ಲಿ ಶುಕ್ರವಾರ ಭಾರಿ ಮಳೆ ಸುರಿದಿದೆ. ಹಲವು ಜಿಲ್ಲೆಗಳಲ್ಲಿ ಶನಿವಾರವೂ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.