ADVERTISEMENT

ತಮಿಳುನಾಡು: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಐದು ಮಂದಿ ಸಾವು

ಪಿಟಿಐ
Published 23 ಅಕ್ಟೋಬರ್ 2020, 13:06 IST
Last Updated 23 ಅಕ್ಟೋಬರ್ 2020, 13:06 IST
ಕಟ್ಟಡದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರುವುದು–ಸಾಂದರ್ಭಿಕ ಚಿತ್ರ
ಕಟ್ಟಡದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರುವುದು–ಸಾಂದರ್ಭಿಕ ಚಿತ್ರ   

ಮದುರೈ: ಪಟಾಕಿ ತಯಾರಿಸುವ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೂವರು ಮಹಿಳೆಯರು ಸೇರಿದಂತೆ ಐದು ಮಂದಿ ಸಾವಿಗೀಡಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪಟಾಕಿ ತಯಾರಿಸಲು ಬಳಸುವ ರಾಸಾಯನಿಕ ಮಿಶ್ರಣದಲ್ಲಿ ಘರ್ಷಣೆಯಿಂದಾಗಿ ಬೆಂಕಿ ಉಂಟಾಗಿರಬಹುದೆಂದು ಪ್ರಾಥಮಿಕ ತನಿಖೆಯಿಂದ ತಿಳಿದಿರುವುದಾಗಿ ಪೊಲೀಸರು ಹೇಳಿದ್ದಾರೆ. ಬೆಂಕಿ ವ್ಯಾಪಿಸುತ್ತಿದ್ದಂತೆ ಸರಣಿ ಸ್ಫೋಟಗಳು ಸಂಭವಿಸಿವೆ ಹಾಗೂ ಕಟ್ಟಡಕ್ಕೆ ತೀವ್ರ ಹಾನಿಯುಂಟಾಗಿದೆ ಎಂದಿದ್ದಾರೆ.

ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಹಲವು ಕಾರ್ಮಿಕರು ಸ್ಫೋಟದಿಂದ ತಪ್ಪಿಸಿಕೊಂಡು ಸುರಕ್ಷಿತ ಸ್ಥಳಕ್ಕೆ ಹೋದರೆ, ಐದು ಜನ ಸಾವಿಗೀಡಾಗಿದ್ದಾರೆ.

ADVERTISEMENT

ಶ್ರಿವಿಲ್ಲಿಪುತ್ತೂರ್ ಮತ್ತು ವಿರುಧುನಗರದಿಂದ ಅಗ್ನಿಶಾಮಕ ವಾಹನಗಳು ಬಂದಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆದಿದೆ.

ದೀಪಾವಳಿ ಪ್ರಯುಕ್ತ ಪಟಾಕಿ ತಯಾರಿಕೆ ನಡೆಯುತ್ತಿದ್ದು, ಕಾರ್ಖಾನೆಗಳಲ್ಲಿ ಸೂಕ್ತ ಸುರಕ್ಷತಾ ಕ್ರಮಗಳು ಅನುಸರಿಸುತ್ತಿರುವುದನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು ಎಂದು ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟ್ಯಾಲಿನ್‌ ಒತ್ತಾಯಿಸಿದ್ದಾರೆ. ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.