ADVERTISEMENT

ಕೇರಳದ ಒಂದೇ ಕುಟುಂಬದ ಐವರಲ್ಲಿ ಕೋವಿಡ್-19 ಪತ್ತೆ: ಆರೋಗ್ಯ ಸಚಿವೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2020, 7:01 IST
Last Updated 8 ಮಾರ್ಚ್ 2020, 7:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುವನಂತಪುರಂ: ದೇಶದಲ್ಲೇ ಮೊದಲ ಬಾರಿಗೆ ಮೂವರಿಗೆ ಕೊರೊನಾ ವೈರಸ್ (ಕೋವಿಡ್-19) ಸೋಂಕು ಕಾಣಿಸಿಕೊಂಡು ಭೀತಿ ಸೃಷ್ಟಿಸಿದ್ದ ಕೇರಳದಲ್ಲೀಗ ಮತ್ತೆ ಐದು ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿವೆ. ಈ ಮೂಲಕ ದೇಶಾದ್ಯಂತ ಸೋಂಕಿತರ ಸಂಖ್ಯೆ 39ಕ್ಕೆ ಏರಿಕೆಯಾಗಿದೆ ಎಂದು ಕೇರಳ ರಾಜ್ಯ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ತಿಳಿಸಿದ್ದಾರೆ.

ಪಥನಾಮ್‌ತಿಟ್ಟುವಿನ ನಿವಾಸಿಗಳಲ್ಲಿ ಮೂವರು ಫೆಬ್ರುವರಿ 29ರಂದು ಇಟಲಿಯಿಂದ ಹಿಂತಿರುಗಿದ್ದರು. ಇವರಲ್ಲಿ ಮತ್ತು ಇವರರಕ್ತಸಂಬಂಧಿಗಳಿಬ್ಬರಲ್ಲಿಯೂ ಸೋಂಕು ಪತ್ತೆಯಾಗಿದೆ. ಸೋಂಕಿತರನ್ನು ಪಥನಾಮ್‌ತಿಟ್ಟು ಸಾರ್ವಜನಿಕ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ಗಳಿಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಇತರದೇಶಗಳಿಂದ ಭಾರತಕ್ಕೆ ಹಿಂತಿರುಗಿದವರುಕೂಡಲೇ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕು ಮತ್ತು ಅಗತ್ಯ ಚಿಕಿತ್ಸೆ ಪಡೆಯಬೇಕು ಎಂದು ಈಗಾಗಲೇ ಸೂಚಿಸಲಾಗಿದೆ.ಇಟಲಿಯಿಂದ ಹಿಂತಿರುಗಿದ ಕುರಿತು ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡದಿರುವುದುಬೇಜವಾಬ್ದಾರಿ ಎಂದು ಸಚಿವರು ಆಕ್ಷೇಪಿಸಿದ್ದಾರೆ.

ADVERTISEMENT

ಜ್ವರದಿಂದ ಬಳಲುತ್ತಿರುವವರು ಸೋಮವಾರ ರಾಜ್ಯದ ರಾಜಧಾನಿ ತಿರುವನಂತಪುರಂನಲ್ಲಿ ನಡೆಯುತ್ತಿರುವ ಮಹಿಳಾ ಹಬ್ಬವಾದ ಅತ್ತುಕಲ್ ಪೊಂಗಲ್‌ನಲ್ಲಿ ಭಾಗವಹಿಸದಂತೆ ಸರ್ಕಾರ ಮನವಿ ಮಾಡಿದೆ. ಸೋಂಕು ತಗುಲಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಪಥನಾಮ್‌ತಿಟ್ಟುವಿನ ಜಿಲ್ಲಾಧಿಕಾರಿ ಸಂಜೆ ತುರ್ತು ಸಭೆಯನ್ನು ಕರೆದಿದ್ದಾರೆ.

ಶನಿವಾರವಷ್ಟೇ ಇರಾನ್‌ನಿಂದ ಹಿಂತಿರುಗಿದ್ದ ಲಡಾಖ್‌ನ ಇಬ್ಬರಿಗೆ ಮತ್ತು ಒಮನ್‌ಗೆ ಪ್ರಯಾಣ ಬೆಳೆಸಿದ್ದ ತಮಿಳುನಾಡಿನ ಓರ್ವ ವ್ಯಕ್ತಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಮೂವರು ರೋಗಿಗಳು ಸ್ಥಿರವಾಗಿರುವುದಾಗಿ ಆರೋಗ್ಯ ಸಚಿವಾಲಯ ಮಾಹಿತಿ ನೀಡಿತ್ತು.

ಕೋವಿಡ್-19 ಕುರಿತಂತೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಸಂಪರ್ಕ ಸಾಧ್ಯವಾಗದಂಥ ಸ್ಥಳಗಳನ್ನು ಗುರುತಿಸುವಂತೆ ಮತ್ತು ರೋಗವು ಮತ್ತಷ್ಟು ಹರಡಿದರೆ ಅಗತ್ಯ ಕ್ರಮಕೈಗೊಳ್ಳಲು ಅವಕಾಶ ಕಲ್ಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.

ಇದುವರೆಗೂ 90 ದೇಶಗಳಒಂದು ಲಕ್ಷಕ್ಕೂ ಹೆಚ್ಚು ಜನರಲ್ಲಿ ಸೋಂಕುಪತ್ತೆಯಾಗಿದೆ. 3,515 ಜನರು ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.