ADVERTISEMENT

ದೆಹಲಿ ವಿಧಾನಸಬೆ ಚುನಾವಣೆ: 20 ದಿನಗಳಲ್ಲಿ ಬಿಜೆಪಿಯಿಂದ 5000 ಸಣ್ಣ ರ್‍ಯಾಲಿ

ಏಜೆನ್ಸೀಸ್
Published 19 ಜನವರಿ 2020, 5:32 IST
Last Updated 19 ಜನವರಿ 2020, 5:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ದೆಹಲಿ ವಿಧಾನಸಬೆ ಚುನಾವಣೆಗೂ ಮುನ್ನ ಬಿಜೆಪಿಯು 5,000 ಸಣ್ಣ ರ್‍ಯಾಲಿಗಳನ್ನು ಮಾಡಲು ಯೋಜನೆ ರೂಪಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ಮೂಲಕ ಆಡಳಿತಾರೂಢ ಆಮ್ ಆದ್ಮಿ ಪಕ್ಷವನ್ನು(ಎಎಪಿ) ದೆಹಲಿ ಗದ್ದುಗೆಯಿಂದ ಕೆಳಗಿಳಿಸಿ ಅಧಿಕಾರ ಸ್ವೀಕರಿಸಲು ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎನ್ನುವುದನ್ನು ಬಹಿರಂಗಪಡಿಸಿದೆ.

ಈ ಕುರಿತು ಎನ್‌ಡಿಟಿವಿ ಜಾಲತಾಣ ವರದಿ ಮಾಡಿದ್ದು, ದೆಹಲಿಯ 70 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿಯು ಪ್ರತಿದಿನ ಮೂರರಿಂದ ನಾಲ್ಕು ರ್‍ಯಾಲಿಗಳನ್ನು ಹಮ್ಮಿಕೊಳ್ಳುವುದಾಗಿ ಹೇಳಿದೆ. ಮುಂದಿನ 20 ದಿನಗಳಲ್ಲಿ ವಿವಿಧೆಡೆ ದಿನವೊಂದಕ್ಕೆ ಒಟ್ಟು 250 ರ್‍ಯಾಲಿಗಳನ್ನು ಬಿಜೆಪಿ ಆಯೋಜಿಸಿದೆ.

ADVERTISEMENT

ದೆಹಲಿ ವಿಧಾನಸಭೆ ಚುನಾವಣೆ ಅಂಗವಾಗಿ ಮತದಾರರೊಂದಿಗಿನ ನೇರ ಮಾತುಕತೆಗಾಗಿ 200ಕ್ಕೂ ಹೆಚ್ಚು ಜನರನ್ನೊಳಗೊಳ್ಳದ ಸಣ್ಣ ರ್‍ಯಾಲಿಗಳು ಮತ್ತು ಕೂಟಗಳನ್ನು ನಡೆಸಲು ಕೇಂದ್ರದ ಬಿಜೆಪಿ ನಾಯಕರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಕೇಂದ್ರ ಸಚಿವ ಸಂಪುಟದ ಹಿರಿಯ ಮಂತ್ರಿಗಳು ಸೇರಿದಂತೆ ಬಿಜೆಪಿಯ ಅಗ್ರ 100 ನಾಯಕರು ಚುನಾವಣಾ ಪ್ರಚಾರದ ಭಾಗವಾಗಲಿದ್ದಾರೆ. ಪಟ್ಟಿಯಲ್ಲಿರುವ 100 ನಾಯಕರು ಮೂರರಿಂದ ನಾಲ್ಕು ಸಣ್ಣ ರ್‍ಯಾಲಿಗಳು ಅಥವಾ ಸಾರ್ವಜನಿಕ ಸಭೆಗಳನ್ನು ನಡೆಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ದೆಹಲಿ ಬಿಜೆಪಿ ಘಟಕವು 10ಕ್ಕೂ ಹೆಚ್ಚು ರ್‍ಯಾಲಿಗಳನ್ನು ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಮನವಿ ಮಾಡಿದ್ದು, ಇದುವರೆಗೆ ಸುಮಾರು ಮೂರು ರ್‍ಯಾಲಿಗಳನ್ನು ನಡೆಸಲು ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.

ಶುಕ್ರವಾರವಷ್ಟೇ ದೆಹಲಿ ವಿಧಾನಸಭೆ ಚುನಾವಣೆಗಾಗಿ ಬಿಜೆಪಿಯು 57 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರೋಹಿಣಿ ಕ್ಷೇತ್ರದಿಂದ ವಿಜೇಂದರ್ ಗುಪ್ತಾ ಮತ್ತು ಮಾಡೆಲ್ ಟೌನ್‌ ಕ್ಷೇತ್ರದಿಂದ ಎಎಪಿ ಶಾಸತಕ ಕಪಿಲ್ ಮಿಶ್ರಾ ಅವರನ್ನು ಕಣಕ್ಕಿಳಿಸಿದೆ. ಆದರೆ, ನವದೆಹಲಿ ಕ್ಷೇತ್ರದಿಂದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ತನ್ನ ಅಭ್ಯರ್ಥಿಯನ್ನು ಇನ್ನೂ ಹೆಸರಿಸಿಲ್ಲ. ಎಎಪಿ ಎಲ್ಲಾ 70 ವಿಧಾನಸಭಾ ಕ್ಷೇತ್ರಗಳಿಗೆ ತನ್ನ ಸ್ಪರ್ಧಿಗಳನ್ನು ಹೆಸರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.