ADVERTISEMENT

ಮಾನವ ಕಳ್ಳಸಾಗಣೆ ವಿರೋಧಿ ಕಾರ್ಯಕರ್ತೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ

​ಪ್ರಜಾವಾಣಿ ವಾರ್ತೆ
Published 22 ಜೂನ್ 2018, 5:56 IST
Last Updated 22 ಜೂನ್ 2018, 5:56 IST
   

ರಾಂಚಿ: ಇಲ್ಲಿನ ಖುಂತಿ ಜಿಲ್ಲೆಯಲ್ಲಿ ಮಾನವ ಕಳ್ಳಸಾಗಣೆ ವಿರೋಧಿ ಕಾರ್ಯಕರ್ತೆಯರಾದ ಐವರು ಯುವತಿಯರನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರಗೈದ ಘಟನೆ ವರದಿಯಾಗಿದೆ. ಈ ಯುವತಿಯರು ಬೀದಿ ನಾಟಕದಲ್ಲಿ ತೊಡಗಿದ್ದ ವೇಳೆ ಅವರನ್ನು ಅಪಹರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮಂಗಳವಾರ ಮಧ್ಯಾಹ್ನ ಎನ್‍ಜಿಒ ಕಾರ್ಯಕರ್ತೆಯರಾದ ಈ ಯುವತಿಯರು ಖುಂತಿ ಜಿಲ್ಲೆಯ ಕೊಚಾಂಗ್ ಬ್ಲಾಕ್‍ನಲ್ಲಿರುವ ಆರ್‌ಸಿ ಮಿಷನ್ ಶಾಲೆಯ ಆವರಣದಲ್ಲಿ ಬೀದಿ ನಾಟಕ ಪ್ರದರ್ಶಿಸುತ್ತಿದ್ದಾಗ ವಾಹನದಲ್ಲಿ ಬಂದ ಸಶಸ್ತ್ರಧಾರಿಗಳು ಮಹಿಳೆಯರನ್ನು ಅಪಹರಿಸಿದ್ದರು ಎಂದು ರಾಂಚಿ ವಲಯದ ಡಿಐಜಿ ಎಚ್.ವಲಿ ಹೋಮ್ಕಾರ್ ಹೇಳಿದ್ದಾರೆ.

ಮಹಿಳೆಯರನ್ನು ಬಲವಂತವಾಗಿ ಕಾರಿನೊಳಗೆ ನೂಕಿ, ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದು ಅತ್ಯಾಚಾರ ಮಾಡಲಾಗಿದೆ. ಅಪರಾಧಿಗಳು ಪಥಲ್‍ಗಡಿ ಬೆಂಬಲಿಗರಾಗಿದ್ದು, ಮೂರು ಗಂಟೆ ನಂತರ ಯುವತಿಯರನ್ನು ಬಿಡುಗಡೆ ಮಾಡಿದ್ದಾರೆ.

ADVERTISEMENT

ಏನಿದು ಪಥಲ್‍ಗಡಿ?
ಕೇಂದ್ರ ಅಥವಾ ರಾಜ್ಯ ಸರ್ಕಾರಕ್ಕಿಂತ ಗ್ರಾಮ ಸಭೆಯೇ ಇಲ್ಲಿ ಅಧಿಕಾರ ನಡೆಸುತ್ತದೆ.ಜಾರ್ಖಂಡ್‍ನ ಹಲವಾರು ಬುಡಕಟ್ಟು ಗ್ರಾಮಗಳಲ್ಲಿ ಈ ವ್ಯವಸ್ಥೆ ಇದೆ.ಈ ಅಧಿಕಾರ ವ್ಯವಸ್ಥೆಯನ್ನು ಪಥಲ್‍ಗಡಿ ಎಂದು ಹೇಳುತ್ತಾರೆ.

ಯುವತಿಯರನ್ನು ಅತ್ಯಾಚಾರಗೈದವರು ಅದನ್ನು ವಿಡಿಯೊ ಚಿತ್ರೀಕರಣ ಮಾಡಿದ್ದು, ಒಂದು ವೇಳೆ ಪೊಲೀಸರಿಗೆ ದೂರು ನೀಡಿದರೆ ವಿಡಿಯೊವನ್ನು ವೈರಲ್ ಮಾಡಲಾಗುವುದು ಎಂದು ಬೆದರಿಕೆಯೊಡ್ಡಿದ್ದಾರೆ.
ಆದಾಗ್ಯೂ, ಈ ರೀತಿಯ ಯಾವುದೇ ವಿಡಿಯೊ ಕಂಡುಬಂದಲ್ಲಿ ತಕ್ಷಣ ಪೊಲೀಸರ ಗಮನಕ್ಕೆ ತನ್ನಿ ಎಂದು ಡಿಐಜಿ ವಿನಂತಿ ಮಾಡಿದ್ದಾರೆ.
ಅಪರಾಧಿಗಳನ್ನು ಪತ್ತೆಹಚ್ಚಲು ಮೂರು ಪ್ರತ್ಯೇಕ ತಂಡಗಳನ್ನು ನಿಯೋಜಿಸಲಾಗಿದೆ. ಕೆಲವೊಬ್ಬರ ಗುರುತು ಪತ್ತೆಯಾಗಿದೆ. ಶಂಕಿತ ಸ್ಥಳಗಳಲ್ಲಿ ಶೋಧ ಕಾರ್ಯ ಮುಂದುವರಿದಿದೆ ಎಂದು ಹೋಮ್ಕಾರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.