
ದುಬೈ: ಕೊಚ್ಚಿಯಿಂದ ಅಬುಧಾಬಿಗೆ ಸಂಚರಿಸುತ್ತಿದ್ದ ವಿಮಾನದಲ್ಲಿದ್ದ ಕೇರಳದ ಇಬ್ಬರು ಶುಶ್ರೂಷಕರು ಹೃದಯಾಘಾತಕ್ಕೆ ಒಳಗಾದ ಸಹಪ್ರಯಾಣಿಕರೊಬ್ಬರ ಜೀವವನ್ನು ಉಳಿಸಿದ್ದಾರೆ.
‘ಅಭಿಜಿತ್ ಜೀಸ್ (26) ಮತ್ತು ಅಜೀಶ್ ನೆಲ್ಸನ್(29) ಉದ್ಯೋಗಕ್ಕಾಗಿ ಏರ್ ಅರೇಬಿಯಾ ವಿಮಾನದಲ್ಲಿ ಯುಎಇಗೆ ತೆರಳುತ್ತಿದ್ದರು. ಪ್ರಯಾಣದ ವೇಳೆ ಸಹಪ್ರಯಾಣಿಕರೊಬ್ಬರು ಏದುಸಿರು ಬಿಡುವುದನ್ನು ಗಮನಿಸಿದ್ದಾರೆ. ತಕ್ಷಣ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ಅವರ ಜೀವ ಉಳಿಸಿದ್ದಾರೆ’ ಎಂದು ‘ಗಲ್ಫ್ ನ್ಯೂಸ್’ ಬುಧವಾರ ವರದಿ ಮಾಡಿದೆ
‘ಏದುಸಿರು ಬಿಡುತ್ತಿದ್ದ ವ್ಯಕ್ತಿಯ ಹೃದಯ ಬಡಿತ ಸ್ತಬ್ಧವಾಗಿತ್ತು. ತಕ್ಷಣ ಅವರಿಗೆ ‘ಸಿಪಿಆರ್’ ಮಾಡಲಾರಂಭಿಸಿದೆವು. ಎರಡು ಬಾರಿ ‘ಸಿಪಿಆರ್’ ಮಾಡಲಾಗಿದೆ’ ಎಂದು ಅಭಿಜಿತ್ ಅವರು ತಿಳಿಸಿದ್ದಾರೆ.
ವಿಮಾನದಲ್ಲಿದ್ದ ವೈದ್ಯ ಡಾ. ಆರೀಫ್ ಅಬ್ದುಲ್ ಖದೀರ್ ಅವರು ಯುವಕರಿಗೆ ನೆರವು ನೀಡಿದರು.
ಹೃದಯಾಘಾತಕ್ಕೆ ಒಳಗಾಗಿದ್ದ ವ್ಯಕ್ತಿಗೆ ವಿಮಾನನಿಲ್ದಾಣದ ವೈದ್ಯಕೀಯ ತಂಡವು ಚಿಕಿತ್ಸೆ ನೀಡಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಅವರ ಕುಟುಂಬಸ್ಥರು ಯುವಕರಿಗೆ ಕೃತಜ್ಞತೆ ಅರ್ಪಿಸಿದ್ದಾರೆ.
ಅಬುಧಾಬಿ ತಲುಪಿದ ಬಳಿಕ ಘಟನೆಯ ಬಗ್ಗೆ ಯಾರಿಗೂ ಹೇಳದೇ ಇಬ್ಬರೂ ಹೊರಟುಹೋಗಿದ್ದರು. ಸಹ ಪ್ರಯಾಣಿಕರೊಬ್ಬರಿಂದ ಈ ವಿಚಾರವು ಬಹಿರಂಗವಾಯಿತು ಎಂದು ಮಾಧ್ಯಮಗಳು ವರದಿ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.