ADVERTISEMENT

ಈಶಾನ್ಯ ಭಾರತದಲ್ಲಿ ಮಳೆಯ ಅಬ್ಬರ: ಅತ್ತ ಕೋವಿಡ್, ಇತ್ತ ಪ್ರವಾಹ...

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 19:23 IST
Last Updated 16 ಜುಲೈ 2020, 19:23 IST
   

ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿರುವ ನಡುವೆಯೇ ಅಸ್ಸಾಂ ಸೇರಿದಂತೆ ಈಶಾನ್ಯ ಭಾರತದ ಹಲವು ಪ್ರದೇಶಗಳಲ್ಲಿಪ್ರವಾಹದ ಬಿಕ್ಕಟ್ಟು ಶುರುವಾಗಿದೆ. ಅಸ್ಸಾಂ ಒಂದರಲ್ಲೇ 68 ಜನರು ಪ್ರವಾಹ ಸಂಬಂಧಿ ಘಟನೆಗಳಿಂದ ಮೃತಪಟ್ಟಿದ್ದಾರೆ. 30 ಜಿಲ್ಲೆಗಳಲ್ಲಿ ಸುಮಾರು 48 ಲಕ್ಷ ಜನರು ಪ್ರವಾಹದ ಸಂತ್ರಸ್ತರಾಗಿದ್ದಾರೆ. 4,500 ಹಳ್ಳಿಗಳು ತೊಂದರೆಗೆ ಈಡಾಗಿವೆ. ಪರಿಹಾರ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಯು ಅಂತರ ಕಾಯ್ದುಕೊಳ್ಳುವುದು ಕಠಿಣವಾಗಿದೆ. 487 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, 1.25 ಲಕ್ಷ ಜನರು ಆಶ್ರಯ ಪಡೆದಿದ್ದಾರೆ.

ಅಸ್ಸಾಂನಲ್ಲಿ ಒಂದು ವಾರದಿಂದ ಭಾರಿ ಪ್ರಮಾಣದಲ್ಲಿ ಮಳೆಯಾಗಿದೆ. ಜುಲೈ 9ರಿಂದ ಜುಲೈ 16ರವರ ಅವಧಿಯಲ್ಲಿ ಅಲ್ಲಿ ವಾಡಿಕೆಗಿಂತ ಶೇ 64ರಷ್ಟು ಹೆಚ್ಚು ಮಳೆ ಸುರಿದಿದೆ.

ರಾಷ್ಟ್ರೀಯ ಉದ್ಯಾನ ಜಲಾವೃತ:ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನ ಮುಳುಗಡೆಯಾಗಿದ್ದು, ಕನಿಷ್ಠ 66 ಪ್ರಾಣಿಗಳು ಮೃತಪಟ್ಟಿವೆ. 170 ಪ್ರಾಣಿಗಳನ್ನು ರಕ್ಷಿಸಲಾಗಿದೆ. ಖಡ್ಗಮೃಗಗಳಮುಖ್ಯ ಆವಾಸ ಸ್ಥಾನ ಎನಿಸಿರುವ ಉದ್ಯಾನದಲ್ಲಿ ಪ್ರಾಣಿಗಳು ಸಂಕಷ್ಟಕ್ಕೆ ಸಿಲುಕಿವೆ. ರಾಜ್ಯದಲ್ಲಿ ಪ್ರವಾಹವು ಈ ಬಾರಿ ಅತಿಹೆಚ್ಚು ಹಾನಿ ಉಂಟುಮಾಡಿದೆ.

ADVERTISEMENT

ಮಳೆಯಲ್ಲಿ ಮುಳುಗೇಳುತ್ತಿರುವ ಮುಂಬೈ:ದೇಶದಾದ್ಯಂತ ಮುಂಗಾರು ಕಾವು ಪಡೆದುಕೊಳ್ಳುತ್ತಿದ್ದು, ಗುಜರಾತ್, ಮಹಾರಾಷ್ಟ್ರದಲ್ಲಿ ‘ರೆಡ್ ಅಲರ್ಟ್’ ಘೋಷಿಸಲಾಗಿದೆ. ಮಹಾರಾಷ್ಟ್ರದಲ್ಲಿ ಕಳೆದೊಂದು ವಾರದಿಂದ ಹೆಚ್ಚು ಮಳೆ ಸುರಿದಿದ್ದು, ಇನ್ನಷ್ಟು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂಬೈ ನಗರ ಮಳೆಯಲ್ಲಿ ಮುಳುಗೇಳುತ್ತಿದೆ. ನೆರೆಯ ಗೋವಾದಲ್ಲಿ ‘ಆರೆಂಜ್‌ ಅಲರ್ಟ್’ ಘೋಷಿಸಲಾಗಿದೆ.

ಹಿಮಾಲಯದ ಲಡಾಖ್‌ ಪ್ರದೇಶದಲ್ಲಿ ಶೇ 63ರಷ್ಟು ಹೆಚ್ಚು ಮಳೆ ಸುರಿದಿದೆ.ಮೇಘಾಲಯದಲ್ಲಿ ಶೇ 45, ಅರುಣಾಚಲ ಪ್ರದೇಶದಲ್ಲಿ ಶೇ 13ರಷ್ಟು ಅಧಿಕ ಮಳೆ ಸುರಿದಿದೆ. ಆಂಧ್ರದಲ್ಲಿ ಶೇ 61, ಬಿಹಾರದಲ್ಲಿ ಶೇ 57, ಗುಜರಾತ್‌ನಲ್ಲಿ ಶೇ 31, ಉತ್ತರ ಪ್ರದೇಶದಲ್ಲಿ ಶೇ 27ರಷ್ಟು ಅಧಿಕ ಮಳೆಯಾಗಿದೆ.

ಕೇರಳ, ಹಿಮಾಲಯ ಭಾಗದಲ್ಲಿ ಮಳೆ ಕೊರತೆ:ಈ ವರ್ಷ ದೆಹಲಿಯಲ್ಲಿ ಕಡಿಮೆ ಮಳೆಯಾಗಿದೆ. ಕಳೆದ ವರ್ಷದ ಜುಲೈ ತಿಂಗಳಿಗೆ ಹೋಲಿಸಿದರೆ ರಾಷ್ಟ್ರ ರಾಜಧಾನಿಯಲ್ಲಿ ಶೇ 50ರಷ್ಟು ಮಳೆ ಕೊರತೆ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಚುರುಕಾಗಲಿದೆ. ಹಿಮಾಲಯ ಭಾಗದ ಹಿಮಾಚಲ ಪ್ರದೇಶದಲ್ಲಿ ಶೇ 28ರಷ್ಟು ಮಳೆ ಕೊರತೆ ಕಂಡುಬಂದಿದೆ. ಜಮ್ಮು ಕಾಶ್ಮೀರವೂ ಮಳೆ ಕೊರತೆ ಎದುರಿಸಿದೆ. ಪ್ರಸಕ್ತ ಹಂಗಾಮಿನ ಮೊದಲ ಮಳೆ ಕಂಡಿದ್ದ ಕೇರಳದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 22ರಷ್ಟು ಮಳೆ ಕೊರತೆ ಕಂಡುಬಂದಿದೆ.ಅತ್ತ ಅಸ್ಸಾಂನಲ್ಲಿ ಮಳೆಯಿಂದ ಪ್ರವಾಹ ಉಂಟಾಗಿದ್ದರೆ, ಈಶಾನ್ಯ ಭಾರತದ ಮಣಿಪುರ ಶೇ 44ರಷ್ಟು, ಮಿಜೋರಾಂನಲ್ಲಿ ಶೇ 38ರಷ್ಟು ಮಳೆ ಕೊರತೆ ಕಂಡುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.