ADVERTISEMENT

ಅಸ್ಸಾಂ | ಪ್ರವಾಹ ಪರಿಸ್ಥಿತಿ ಉಲ್ಬಣ: ಐದು ಲಕ್ಷಕ್ಕೂ ಅಧಿಕ ಮಂದಿಗೆ ತೊಂದರೆ

ಪಿಟಿಐ
Published 3 ಜೂನ್ 2025, 15:39 IST
Last Updated 3 ಜೂನ್ 2025, 15:39 IST
<div class="paragraphs"><p>ಅಸ್ಸಾಂನ ಹೊಜಾಯ್ ಜಿಲ್ಲೆಯ ಜಮುನಾಮುಖ್ ಪ್ರದೇಶದಲ್ಲಿ ಪ್ರವಾಹದಿಂದ ತೊಂದರೆಗೊಳಗಾದವರು ದೋಣಿಯಲ್ಲಿ ಸುರಕ್ಷಿತ ಪ್ರದೇಶಕ್ಕೆ ತೆರಳಿದರು</p></div>

ಅಸ್ಸಾಂನ ಹೊಜಾಯ್ ಜಿಲ್ಲೆಯ ಜಮುನಾಮುಖ್ ಪ್ರದೇಶದಲ್ಲಿ ಪ್ರವಾಹದಿಂದ ತೊಂದರೆಗೊಳಗಾದವರು ದೋಣಿಯಲ್ಲಿ ಸುರಕ್ಷಿತ ಪ್ರದೇಶಕ್ಕೆ ತೆರಳಿದರು

   

–ಪಿಟಿಐ ಚಿತ್ರ 

ಗುವಾಹಟಿ: ಅಸ್ಸಾಂನಲ್ಲಿ ಮಂಗಳವಾರವೂ ಮಳೆಯ ಅಬ್ಬರ ಮುಂದುವರಿದಿದ್ದು, ಪ್ರವಾಹ ಪರಿಸ್ಥಿತಿ ಉಲ್ಬಣಗೊಂಡಿದೆ. 22 ಜಿಲ್ಲೆಗಳ 5.35 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಿಂದ ತೊಂದರೆಗೀಡಾಗಿದ್ದು, ಹವಾಮಾನ ಇಲಾಖೆಯು ರಾಜ್ಯದ ಕೆಲವು ಭಾಗಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಿದೆ.

ADVERTISEMENT

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರಿಗೆ ಕರೆ ಮಾಡಿ ಮಾತನಾಡಿದ್ದು, ಪ್ರವಾಹ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದಾರೆ. ಕೇಂದ್ರ ಸರ್ಕಾರದ ಸಂಪೂರ್ಣ ಬೆಂಬಲದ ಭರವಸೆಯನ್ನು ಅವರು ನೀಡಿದ್ದಾರೆ. 

ಹಿಮಂತ ಅವರು ಪ್ರವಾಹದಿಂದ ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾಗಿರುವ ಕಛಾರ್‌ ಜಿಲ್ಲೆಗೆ ಭೇಟಿ ನೀಡಿ ಸಂತ್ರಸ್ತರ ಜತೆ ಮಾತುಕತೆ ನಡೆಸಿದ್ದಾರೆ. 

ಗುವಾಹಟಿಯ ಪ್ರಾದೇಶಿಕ ಹವಾಮಾನ ಕೇಂದ್ರವು ಧುಬ್ರಿ, ದಕ್ಷಿಣ ಸಲ್ಮಾರ ಮನಕಚಾರ್, ಗೋಲ್‌ಪಾರಾ ಮತ್ತು ಕೊಕ್ರಝಾರ್‌ ಜಿಲ್ಲೆಗಳಿಗೆ ಮಂಗಳವಾರ ‘ಆರೆಂಜ್‌ ಅಲರ್ಟ್‌’ ನೀಡಿದೆ. 

ಪ್ರವಾಹ ಮತ್ತು ಭೂಕುಸಿತ ಸೇರಿದಂತೆ ಮಳೆಸಂಬಂಧಿ ಅವಘಡಗಳಿಂದ ಒಟ್ಟು 11 ಮಂದಿ ಮೃತಪಟ್ಟಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ. ಒಟ್ಟಾರೆ ಪ್ರವಾಹ ಪರಿಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ರಸ್ತೆ, ರೈಲು ಮತ್ತು ದೋಣಿ ಸೇವೆಗಳು ಸ್ಥಗಿತಗೊಂಡಿವೆ.

22 ಜಿಲ್ಲೆಗಳ 1,254 ಗ್ರಾಮಗಳಲ್ಲಿ 5.35 ಲಕ್ಷಕ್ಕೂ ಹೆಚ್ಚು ಜನರು ತೊಂದರೆಗೀಡಾಗಿದ್ದಾರೆ. ಶ್ರೀಭೂಮಿ ಜಿಲ್ಲೆಯಲ್ಲಿ ಅತಿಹೆಚ್ಚು ಅಂದರೆ 1.94 ಲಕ್ಷ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಟ್ಟು 165 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, 31,212 ಮಂದಿ ಆಶ್ರಯ ಪಡೆದಿದ್ದಾರೆ. 

ಬ್ರಹ್ಮಪುತ್ರ, ಬರಾಕ್‌ ಮತ್ತು ಕೊಪಿಲಿ ನದಿಗಳು ಹಲವು ಕಡೆಗಳಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಸೋಮವಾರ ರಾತ್ರಿವರೆಗಿನ ಮಾಹಿತಿ ಪ್ರಕಾರ ರಾಜ್ಯದ ಇತರ ಏಳು ನದಿಗಳೂ ಉಕ್ಕಿ ಹರಿಯುತ್ತಿವೆ.

ಈಶಾನ್ಯದ ಇತರ ರಾಜ್ಯಗಳಾದ ಮಣಿಪುರ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲೂ ಮಳೆ ಮುಂದುವರಿದಿದೆ. 

ಸಿಕ್ಕಿಂ: ಮುಂದುವರಿದ ಶೋಧ
ಗ್ಯಾಂಗ್ಟೋಕ್: ಸಿಕ್ಕಿಂನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ನಾಪತ್ತೆಯಾಗಿರುವ ಆರು ಯೋಧರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಎನ್‌ಡಿಆರ್‌ಎಫ್‌ನ 23 ಸದಸ್ಯರ ತಂಡ ಮಂಗಳವಾರ ಶೋಧ ಕಾರ್ಯಕ್ಕೆ ಕೈಜೋಡಿಸಿದೆ. ಮಂಗನ್ ಜಿಲ್ಲೆಯ ಲಾಚೆನ್‌ ಪಟ್ಟಣದ ಸಮೀಪ ಭಾನುವಾರ ರಾತ್ರಿ 7ರ ಸುಮಾರಿಗೆ ಸೇನೆಯ ಶಿಬಿರ ಇರುವ ಜಾಗದಲ್ಲಿ ಭೂಕುಸಿತ ಸಂಭವಿಸಿತ್ತು. ಘಟನೆಯಲ್ಲಿ ಮೂವರು ಯೋಧರು ಮೃತಪಟ್ಟು ಆರು ಯೋಧರು ನಾಪತ್ತೆಯಾಗಿದ್ದರು.

ಮಣಿಪುರ: 10477 ಮನೆಗಳಿಗೆ ಹಾನಿ

  • ಮಣಿಪುರದಲ್ಲಿ ಪ್ರವಾಹದಿಂದ 56 ಸಾವಿರ ಮಂದಿ ತೊಂದರೆಗೊಳಗಾಗಿದ್ದು 10477 ಮನೆಗಳಿಗೆ ಹಾನಿಯಾಗಿವೆ

  • ಇಂಫಾಲ್‌ ಪೂರ್ವ ಜಿಲ್ಲೆಯಲ್ಲಿ ಸೋಮವಾರ ವ್ಯಕ್ತಿಯೊಬ್ಬರು ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ

  • ಕಳೆದ ಐದು ದಿನಗಳಲ್ಲಿ ರಾಜ್ಯದಾದ್ಯಂತ 93 ಭೂಕುಸಿತ ಘಟನೆಗಳು ವರದಿಯಾಗಿವೆ

  • ಅರುಣಾಚಲ ಪ್ರದೇಶದಲ್ಲಿ ಮಳೆ ಸಂಬಂಧಿ ಅವಘಡಗಳಿಂದ ಒಟ್ಟು 11 ಮಂದಿ ಮೃತಪಟ್ಟಿದ್ದಾರೆ

  • 23 ಜಿಲ್ಲೆಗಳ 156 ಗ್ರಾಮಗಳ ಜನರು ಪ್ರವಾಹದಿಂದ ತೊಂದರೆಗೆ ಸಿಲುಕಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.