ADVERTISEMENT

ಈ ವರ್ಷದ ‘ಅಮರನಾಥ ಯಾತ್ರೆ’ಗೆ ಸಂಪೂರ್ಣ ಬಿಗಿಭದ್ರತೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2022, 15:24 IST
Last Updated 4 ಏಪ್ರಿಲ್ 2022, 15:24 IST
ಅಮರನಾಥ ಯಾತ್ರೆ
ಅಮರನಾಥ ಯಾತ್ರೆ   

ಶ್ರೀನಗರ: ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿರುವ ಪ್ರಸಿದ್ಧ ಅಮರನಾಥ ವಾರ್ಷಿಕ ಯಾತ್ರೆಗೆ ಈ ಬಾರಿ ಅತಿಹೆಚ್ಚಿನ ಸಂಖ್ಯೆಯ ಯಾತ್ರಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಯಾತ್ರೆಯ ಅವಧಿಯಲ್ಲಿ ಸಂಪೂರ್ಣ ಬಿಗಿಭದ್ರತೆ ಒದಗಿಸಲು ಜಮ್ಮು ಮತ್ತು ಕಾಶ್ಮೀರ ಆಡಳಿತವು ನಿರ್ಧರಿಸಿದೆ.

43 ದಿನಗಳ ಯಾತ್ರೆಯು ಜೂನ್‌ 30 ರಂದು ಆರಂಭವಾಗಲಿದ್ದು, ಸಂಪ್ರದಾಯದಂತೆ ರಕ್ಷಬಂಧನ ದಿನದಂದು (ಆಗಸ್ಟ್‌ 11) ಮುಕ್ತಾಯಗೊಳ್ಳಲಿದೆ. ವಾರ್ಷಿಕ ಯಾತ್ರೆಯ ನೋಂದಣಿಯು ಏಪ್ರಿಲ್‌ 11ರಿಂದ ಆರಂಭವಾಗಲಿದೆ.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಮುನ್ನ 2019ರಲ್ಲಿ ಯಾತ್ರೆಯನ್ನು ಮಧ್ಯಂತರದಲ್ಲಿ ರದ್ದುಗೊಳಿಸಲಾಗಿತ್ತು. ನಂತರ ಕಾಣಿಸಿಕೊಂಡ ಕೋವಿಡ್‌–19 ಸಾಂಕ್ರಾಮಿಕ ಸೋಂಕಿನ ಭೀತಿಯಿಂದಾಗಿ ಕಳೆದ ಎರಡು ವರ್ಷದಿಂದ ಯಾತ್ರೆಯು ಕೇವಲ ಸಾಂಕೇತಿಕವಾಗಿ ಆಚರಣೆಗೆ ಸೀಮಿತವಾಗಿತ್ತು.

ADVERTISEMENT

‘ಈ ವರ್ಷ ಕೋವಿಡ್‌ ಇಳಿಕೆಯಾಗಿರುವುದರಿಂದ ದಾಖಲೆ ಪ್ರಮಾಣದ ಯಾತ್ರಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಯಾತ್ರಾರ್ಥಿಗಳ ಶಿಬಿರಗಳು ಹೆಚ್ಚಾಗಲಿದೆ. ಈ ವರ್ಷದ ಯಾತ್ರೆಯು ಶಾಂತಿಯುತ ಹಾಗೂ ಸುಗಮವಾಗಿ ನಡೆಯುವ ನಿಟ್ಟಿನಲ್ಲಿ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗುವುದು’ ಎಂದು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್ಬಾಗ್‌ ಸಿಂಗ್‌ ಹೇಳಿದ್ದಾರೆ.

‘ಅನಂತನಾಗ್‌ ಜಿಲ್ಲೆಯ ಪಹಲ್ಗಾಮ್‌ ಮಾರ್ಗ ಹಾಗೂ ಗಂದರ್‌ಬಲ್‌ ಜಿಲ್ಲೆಯ ಬಲ್ತಾಳ್‌ ಸಮೀಪದ ಮಾರ್ಗಗಳಲ್ಲಿ 43 ದಿನಗಳ ಯಾತ್ರೆಗಾಗಿ 40 ಸಾವಿರ ಕೇಂದ್ರ ಅರೆಸೇನಾಪಡೆ ಹಾಗೂ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲು ನಿರ್ಧರಿಸಲಾಗಿದೆ. ಸುಧಾರಿತ ಸ್ಫೋಟಕಗಳನ್ನು ಬಳಸಿ ನಡೆಸಲಾಗುವ ವಿದ್ವಂಸಕ ಕೃತ್ಯಗಳನ್ನು ತಡೆಯಲು ಸಿಆರ್‌ಪಿಎಫ್‌ ರಚಿಸಲಾಗಿರುವ ಸುಧಾರಿತ ಸ್ಫೋಟಕ ನಿಗ್ರಹ ತಂಡಗಳನ್ನು ನಿಯೋಜಿಸಲಾಗುವುದು’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.