ADVERTISEMENT

ಕಾಶ್ಮೀರದಲ್ಲಿ ಕ್ಷೀಣಿಸುತ್ತಿರುವ ಸಕ್ರಿಯ ಉಗ್ರರ ಸಂಖ್ಯೆ: ಐಜಿಪಿ ವಿಜಯ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2021, 6:21 IST
Last Updated 31 ಡಿಸೆಂಬರ್ 2021, 6:21 IST
ವಿಜಯಕುಮಾರ್‌, ಐಜಿಪಿ, ಕಾಶ್ಮೀರ ವಲಯ
ವಿಜಯಕುಮಾರ್‌, ಐಜಿಪಿ, ಕಾಶ್ಮೀರ ವಲಯ   

ಶ್ರೀನಗರ: ‘ಕಾಶ್ಮೀರ ಕಣಿವೆಯಲ್ಲಿ ಸಕ್ರಿಯ ಉಗ್ರರ ಸಂಖ್ಯೆ ಕ್ಷೀಣಿಸುತ್ತಿದ್ದು, ಮೂರು ದಶಕಗಳಲ್ಲೇ ಉಗ್ರರ ಸಂಖ್ಯೆ 200ಕ್ಕಿಂತ ಕಡಿಮೆಯಾಗಿದೆ. ಸದ್ಯ ಸ್ಥಳೀಯ ಸಕ್ರಿಯ ಉಗ್ರರ ಸಂಖ್ಯೆ 86 ಇದೆ’ ಎಂದು ಕಾಶ್ಮೀರ ವಲಯ ಐಜಿಪಿ ವಿಜಯ್‌ಕುಮಾರ್‌ ತಿಳಿಸಿದರು.

ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2021ರಲ್ಲಿ ಉಗ್ರ ಪಡೆ ಸೇರಿದ್ದ 128 ಸ್ಥಳೀಯ ಉಗ್ರರಲ್ಲಿ 73 ಮಂದಿಯನ್ನು ಹತ್ಯೆ ಮಾಡಲಾಗಿದ್ದು, 17 ಮಂದಿಯನ್ನು ಬಂಧಿಸಲಾಗಿದೆ. 2021ರಲ್ಲಿ ಉಗ್ರ ಪಡೆ ಸೇರಿದ 39 ಮಂದಿ ಮಾತ್ರ ಸದ್ಯ ಸಕ್ರಿಯರಾಗಿದ್ದಾರೆ’ಎಂದು ಹೇಳಿದರು.

ಜನರಲ್‌ ಕಮಾಂಡಿಂಗ್‌ ಆಫೀಸರ್‌ ಡಿ.ಪಿ.ಪಾಂಡೆ ಮಾತನಾಡಿ, ‘ಉಗ್ರರ ನೇಮಕಾತಿಯೂ ಕೂಡ ಕಡಿಮೆಯಾಗಿದ್ದು, ಕಳೆದ ವರ್ಷ 180 ಉಗ್ರರ ನೇಮಕ ನಡೆದಿತ್ತು. ಈ ಬಾರಿ 128ರಿಂದ 130 ಉಗ್ರರ ನೇಮಕ ನಡೆದಿದೆ’ ಎಂದರು.

ADVERTISEMENT

ಕಾಶ್ಮೀರದಲ್ಲಿ 165 ಸ್ಥಳೀಯ ಉಗ್ರರು, 75 ವಿದೇಶಿ ಉಗ್ರರು ಸಕ್ರಿಯರಾಗಿದ್ದಾರೆ ಎಂದು ಬುಧವಾರ (ಡಿ.29) ಐಜಿಪಿ ಹೇಳಿದ್ದರು. ಗುರುವಾರ ಇಬ್ಬರು ವಿದೇಶಿ ಉಗ್ರ ಸೇರಿ ಆರು ಮಂದಿಯನ್ನು ಹತ್ಯೆಗೈಯಲಾಗಿದ್ದು, ಈಗ ಸ್ಥಳೀಯ ಉಗ್ರರ ಸಂಖ್ಯೆ 159, ವಿದೇಶಿ ಉಗ್ರರ ಸಂಖ್ಯೆ 73ಕ್ಕೆ ಇಳಿದಿದೆ.

ಕಾಶ್ಮೀರದಲ್ಲಿ ಈ ವರ್ಷ 87 ಎನ್‌ಕೌಂಟರ್‌ ನಡೆದಿದ್ದು, 19 ವಿದೇಶಿ ಉಗ್ರರು, 149 ಸ್ಥಳೀಯರು ಸೇರಿ 168 ಉಗ್ರರನ್ನು ಭದ್ರತೆ ಪಡೆಗಳು ಕೊಂದುಹಾಕಿವೆ. ಕಳೆದ ವರ್ಷ 200 ಉಗ್ರರನ್ನು ಹತ್ಯೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.