ನವದೆಹಲಿ: ಕಾಂಗ್ರೆಸ್ ನಾಯಕತ್ವ ಮತ್ತು ಪಕ್ಷದ ಮುಖಂಡ ಶಶಿ ತರೂರ್ ನಡುವಿನ ‘ಮುಸುಕಿನ ಗುದ್ದಾಟ’ ಬುಧವಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶಂಸಿಸಿದ್ದಕ್ಕೆ ತರೂರ್ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ. ಅದಕ್ಕೆ ತರೂರ್ ಕೂಡಾ ತಿರುಗೇಟು ನೀಡಿದ್ದಾರೆ.
ತಮ್ಮ ಪಕ್ಷವು ‘ದೇಶ ಮೊದಲು’ ಎಂಬ ಮಂತ್ರದ ಮೇಲೆ ನಂಬಿಕೆಯಿಟ್ಟಿದ್ದರೆ, ಕೆಲವರು ‘ಮೋದಿ ಮೊದಲು ಮತ್ತು ದೇಶ ನಂತರ’ ಎಂದು ನಂಬಿದ್ದಾರೆ ಎಂದು ಖರ್ಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
‘ನನಗೆ ಚೆನ್ನಾಗಿ ಇಂಗ್ಲಿಷ್ ಓದಲು ಬರುವುದಿಲ್ಲ. ಅವರ (ತರೂರ್) ಭಾಷಾ ಪ್ರೌಢಿಮೆ ಅಪಾರವಾದುದು. ಅದೇ ಕಾರಣಕ್ಕೆ ನಾವು ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಮಾಡಿದ್ದೇವೆ’ ಎಂದು ಹೇಳಿದ್ದಾರೆ. ತರೂರ್ ಅವರು ತಮ್ಮ ಲೇಖನದಲ್ಲಿ ಪ್ರಧಾನಿ ಮೋದಿ ಅವರನ್ನು ಹೊಗಳಿರುವುದರ ಬಗ್ಗೆ ಕೇಳಿದಾಗ ಖರ್ಗೆ ಈ ರೀತಿ ಉತ್ತರಿಸಿದ್ದಾರೆ.
‘ಆಪರೇಷನ್ ಸಿಂಧೂರದ ಸಂದರ್ಭದಲ್ಲಿ ವಿರೋಧ ಪಕ್ಷಗಳು ಒಗ್ಗಟ್ಟಾಗಿ ಸೇನೆಯ ಜತೆ ಇದ್ದವು ಎಂಬುದನ್ನು ಹೇಳಲು ನಾನು ಬಯಸುತ್ತೇನೆ. ನಮಗೆ (ಕಾಂಗ್ರೆಸ್‌ನವರಿಗೆ) ದೇಶವು ಎಲ್ಲಕ್ಕಿಂತಲೂ ಮುಖ್ಯವಾಗಿದ್ದು, ಇಂತಹ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರದ ಜತೆ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದಿದ್ದೇವೆ. ‘ದೇಶ ಮೊದಲು, ಪಕ್ಷ ನಂತರ’ ಎಂದೂ ಹೇಳಿದ್ದೇವೆ. ಆದರೆ ಕೆಲವರು ‘ಮೋದಿ ಮೊದಲು, ದೇಶ ನಂತರ’ ಎಂದು ಹೇಳುತ್ತಾರೆ. ಅದಕ್ಕೆ ನಾವೇನು ಮಾಡಬೇಕು?’ ಎಂದಿದ್ದಾರೆ.
‘ಮೋದಿ ಅವರು ದಕ್ಷ ಆಡಳಿತ, ಕ್ರಿಯಾಶೀಲತೆ ಮತ್ತು ಇಚ್ಛಾಶಕ್ತಿಯಿಂದ ಜಾಗತಿಕ ವೇದಿಕೆಯಲ್ಲಿ ಭಾರತದ ‘ಪ್ರಮುಖ ಆಸ್ತಿ’ಯಾಗಿದ್ದಾರೆ ಎಂದು ತರೂರ್ ತಮ್ಮ ಲೇಖನದಲ್ಲಿ ಬರೆದಿದ್ದರು. ‘ದಿ ಹಿಂದೂ’ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ಈ ಲೇಖನವನ್ನು ಪ್ರಧಾನಿ ಕಚೇರಿ ತನ್ನ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿತ್ತು.
ಬರೆಯಲು ಬಯಸುವವರು ತಮಗೆ ಇಷ್ಟವಾದದ್ದನ್ನು ಬರೆಯಲಿ. ಅದರಿಂದ ನಮಗೆ ಯಾವುದೇ ತೊಂದರೆ ಇಲ್ಲ. ಇತರರ ಬಗ್ಗೆ ಗಮನಹರಿಸುವ ಅಗತ್ಯವಿಲ್ಲ- ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ
‘ರೆಕ್ಕೆಗಳು ನಿಮ್ಮದು’
ತರೂರ್ ಅವರು ‘ಎಕ್ಸ್’ನಲ್ಲಿ ಗೂಡಾರ್ಥದ ಪೋಸ್ಟ್‌ವೊಂದನ್ನು ಹಾಕುವ ಮೂಲಕ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಹಕ್ಕಿಯ ಚಿತ್ರವೊಂದನ್ನು ಪೋಸ್ಟ್ ಮಾಡಿರುವ ತರೂರ್ ಅದರ ಕೆಳಗೆ ‘ಹಾರಾಡಲು ಅನುಮತಿ ಕೇಳಬೇಡಿ. ರೆಕ್ಕೆಗಳು ನಿಮ್ಮದು ಮತ್ತು ಆಕಾಶವು ಯಾರಿಗೂ ಸೇರಿದ್ದಲ್ಲ’ ಎಂದು ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.