ಸಾಂದರ್ಭಿಕ ಚಿತ್ರ
ನವದೆಹಲಿ: 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 13,000 ಚದರ ಕಿ.ಮೀ. ಅರಣ್ಯ ಪ್ರದೇಶ ಅತಿಕ್ರಮಣಕ್ಕೆ ಒಳಗಾಗಿದೆ ಎಂದು ಕೇಂದ್ರ ಪರಿಸರ ಸಚಿವಾಲಯವು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ(ಎನ್‌ಜಿಟಿ) ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ. ಇದು ದೆಹಲಿ, ಸಿಕ್ಕಿಂ ಮತ್ತು ಗೋವಾದ ಒಟ್ಟು ಭೌಗೋಳಿಕ ಪ್ರದೇಶಕ್ಕಿಂತ ಹೆಚ್ಚು.
ಭಾರತದಲ್ಲಿ ದೆಹಲಿಯ ಐದು ಪಟ್ಟು ಹೆಚ್ಚು ಗಾತ್ರದ 7,50,648 ಹೆಕ್ಟೇರ್ (7,506.48 ಚದರ ಕಿ.ಮೀ) ಅರಣ್ಯ ಪ್ರದೇಶ ಅತಿಕ್ರಮಣಕ್ಕೆ ಒಳಗಾಗಿದೆ ಎಂದು ಸರ್ಕಾರಿ ದತ್ತಾಂಶವನ್ನು ಉಲ್ಲೇಖಿಸಿ ಕಳೆದ ವರ್ಷ ಪಿಟಿಐ ವರದಿ ಮಾಡಿತ್ತು.
ಇದನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿದ ಎನ್‌ಜಿಟಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಅರಣ್ಯ ಪ್ರದೇಶಗಳ ಅತಿಕ್ರಮಣದ ವಿವರಗಳನ್ನು ನಿಗದಿತ ನಮೂನೆಯಲ್ಲಿ ಸಂಗ್ರಹಿಸುವಂತೆ ಸಚಿವಾಲಯಕ್ಕೆ ಕಳೆದ ವರ್ಷದ ಏಪ್ರಿಲ್‌ನಲ್ಲಿ ನಿರ್ದೇಶನ ನೀಡಿತ್ತು.
ಈ ಸಂಬಂಧ ಸಚಿವಾಲಯ ಕಳೆದ ವಾರ ಎನ್‌ಜಿಟಿಗೆ ವರದಿ ಸಲ್ಲಿಸಿದ್ದು, 2024ರ ಮಾರ್ಚ್ ವೇಳೆಗೆ 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 13,05,668.1 ಹೆಕ್ಟೇರ್ (13,056 ಚದರ ಕಿ.ಮೀ) ಅರಣ್ಯ ಪ್ರದೇಶ ಅತಿಕ್ರಮಣಕ್ಕೆ ಒಳಗಾಗಿದೆ ಎಂದು ಹೇಳಿದೆ.
ಅಸ್ಸಾಂ, ಅರುಣಾಚಲ ಪ್ರದೇಶ, ಆಂಧ್ರ ಪ್ರದೇಶ, ಚಂಡೀಗಢ, ಛತ್ತೀಸಗಢ, ಕೇರಳ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ತಮಿಳುನಾಡು, ತ್ರಿಪುರ, ಉತ್ತರಾಖಂಡ, ಉತ್ತರ ಪ್ರದೇಶ, ಜಾರ್ಖಂಡ್, ಸಿಕ್ಕಿಂ ಮಧ್ಯಪ್ರದೇಶ, ಮಣಿಪುರ, ಪುದುಚೇರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯು, ಲಕ್ಷದ್ವೀಪ ಸೇರಿವೆ.
ಬಿಹಾರ, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನ, ತೆಲಂಗಾಣ, ಪಶ್ಚಿಮ ಬಂಗಾಳ, ನಾಗಾಲ್ಯಾಂಡ್, ದೆಹಲಿ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್.
ಸಚಿವಾಲಯದ ವರದಿಯ ಪ್ರಕಾರ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಮಧ್ಯಪ್ರದೇಶದಲ್ಲಿಯೇ ಅತಿ ಹೆಚ್ಚು ಅರಣ್ಯ ಪ್ರದೇಶ ಅತಿಕ್ರಮಣಕ್ಕೆ ಒಳಗಾಗಿದೆ. 2024ರ ಮಾರ್ಚ್ ಹೊತ್ತಿಗೆ 5,460.9 ಚದರ ಕಿ.ಮೀ. ಅರಣ್ಯ ಪ್ರದೇಶವನ್ನು ಅತಿಕ್ರಮಿಸಲಾಗಿದೆ. ನಂತರದಲ್ಲಿ ಅಸ್ಸಾಂನಲ್ಲಿ 3,620.9 ಚದರ ಕಿ.ಮೀ ಅರಣ್ಯ ಪ್ರದೇಶ ಅತಿಕ್ರಮಣಕ್ಕೆ ಒಳಗಾಗಿದೆ.
ಕರ್ನಾಟಕದಲ್ಲಿ ಒಟ್ಟು 863.08 ಚದರ ಕಿ.ಮೀ ಅರಣ್ಯ ಭೂಮಿ ಅತಿಕ್ರಮಣಕ್ಕೆ ಒಳಗಾಗಿದ್ದು, ಮಹಾರಾಷ್ಟ್ರದಲ್ಲಿ 575.54 ಚದರ ಕಿ.ಮೀ, ಅರುಣಾಚಲ ಪ್ರದೇಶದಲ್ಲಿ 534.9 ಚದರ ಕಿ.ಮೀ , ಒಡಿಶಾದಲ್ಲಿ 405.07 ಚದರ ಕಿ.ಮೀ, ಉತ್ತರ ಪ್ರದೇಶದಲ್ಲಿ 264.97 ಚದರ ಕಿ.ಮೀ, ಮಿಜೋರಾಂನಲ್ಲಿ 247.72 ಚದರ ಕಿ.ಮೀ , ಜಾರ್ಖಂಡ್‌ನಲ್ಲಿ 200.40 ಚದರ ಕಿ.ಮೀ ಮತ್ತು ಛತ್ತೀಸಗಢದಲ್ಲಿ 168.91 ಚದರ ಕಿ.ಮೀ. ಅರಣ್ಯ ಭೂಮಿ ಅತಿಕ್ರಮಣಕ್ಕೆ ಒಳಗಾಗಿದೆ.
ತಮಿಳುನಾಡಿನಲ್ಲಿ 157.68 ಚದರ ಕಿ.ಮೀ., ಆಂಧ್ರಪ್ರದೇಶ 133.18 ಚದರ ಕಿ.ಮೀ., ಗುಜರಾತ್ 130.08 ಚದರ ಕಿ.ಮೀ., ಪಂಜಾಬ್ 75.67 ಚದರ ಕಿ.ಮೀ., ಉತ್ತರಾಖಂಡ 49.92 ಚದರ ಕಿ.ಮೀ. ಮತ್ತು ಕೇರಳ 49.75 ಚದರ ಕಿ.ಮೀ., ತ್ರಿಪುರದಲ್ಲಿ 42.42 ಚದರ ಕಿ.ಮೀ. , ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ 37.42 ಚದರ ಕಿ.ಮೀ. ಮತ್ತು ಮಣಿಪುರದಲ್ಲಿ 32.7 ಚದರ ಕಿ.ಮೀ. ಅರಣ್ಯ ಪ್ರದೇಶ ಅತಿಕ್ರಮಣಕ್ಕೆ ಒಳಗಾಗಿದೆ.
ಇದುವರೆಗೆ 409.77 ಚದರ ಕಿ.ಮೀ ಅರಣ್ಯ ಭೂಮಿ ಅತಿಕ್ರಮಣ ತೆರವು ಮಾಡಲಾಗಿದೆ ಎಂದು ಸಚಿವಾಲಯ ವರದಿಯಲ್ಲಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.