ADVERTISEMENT

ದೇಶದಾದ್ಯಂತ 7,506 ಚದರ ಕಿ.ಮೀ ಅರಣ್ಯ ಪ್ರದೇಶ ಒತ್ತುವರಿ: ಕೇಂದ್ರ ಸರ್ಕಾರ

ಪಿಟಿಐ
Published 5 ಜನವರಿ 2024, 13:13 IST
Last Updated 5 ಜನವರಿ 2024, 13:13 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ದೇಶದಾದ್ಯಂತ 7,506 ಚದರ ಕಿ.ಮೀ ಅರಣ್ಯ ಪ್ರದೇಶ ಒತ್ತುವರಿಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇದು ರಾಷ್ಟ್ರ ರಾಜಧಾನಿ ದೆಹಲಿಯ ಭೌಗೋಳಿಕ ವಿಸ್ತೀರ್ಣಕ್ಕೆ ಹೋಲಿಸಿದರೆ ಐದು ಪಟ್ಟು ಅಧಿಕ ಎಂದು ಹೇಳಲಾಗಿದೆ. ದೆಹಲಿಯು 1,483 ಚದರ ಕಿ.ಮೀ ವಿಸ್ತೀರ್ಣ ಹೊಂದಿದೆ.

ರಾಷ್ಟ್ರದಾದ್ಯಂತ ಆಗಿರುವ ಒತ್ತುವರಿಯ ಶೇ 45 ರಷ್ಟು ಅಸ್ಸಾಂ ಒಂದರಲ್ಲೇ ವರದಿಯಾಗಿದೆ. ಇಲ್ಲಿನ ಒಟ್ಟು ಭೂ ವಿಸ್ತೀರ್ಣದ ಶೇ 12 ರಷ್ಟು, ಅಂದರೆ, 3,407.48 ಚದರ ಕಿ.ಮೀ. ಅರಣ್ಯ ಪ್ರದೇಶ ಒತ್ತುವರಿಗೊಂಡಿದೆ ಎಂದು ಸರ್ಕಾರದ ಇತ್ತೀಚಿನ ಅಂಕಿ–ಅಂಶಗಳಿಂದ ತಿಳಿದುಬಂದಿದೆ.

ADVERTISEMENT

ದೇಶದ ಭೌಗೋಳಿಕ ವಿಸ್ತೀರ್ಣದ ಪೈಕಿ ಶೇ 23.58 ರಷ್ಟು ಪ್ರದೇಶದಲ್ಲಿ ಅರಣ್ಯವಿದೆ. ಇದರ ಪ್ರಮಾಣ 7,75,288 ಚದರ ಕಿ.ಮೀ. ಆಗುತ್ತದೆ.

ಶೇ 56 ರಷ್ಟು ಅತಿಕ್ರಮಣವು ಈಶಾನ್ಯ ರಾಜ್ಯಗಳಲ್ಲೇ ವರದಿಯಾಗಿದೆ. ಅರುಣಾಚಲ ಪ್ರದೇಶದಲ್ಲಿ 534.50 ಚದರ ಕಿ.ಮೀ, ಮಿಜೋರಾಂನಲ್ಲಿ 107.07 ಚದರ ಕಿ.ಮೀ, ಮೇಘಾಲಯದಲ್ಲಿ 98.16 ಚದರ ಕಿ.ಮೀ, ತ್ರಿಪುರಾದಲ್ಲಿ 36.21 ಚದರ ಕಿ.ಮೀ, ಮಣಿಪುರದಲ್ಲಿ 22.13 ಚದರ ಕಿ.ಮೀ ಮತ್ತು ನಾಗಾಲ್ಯಾಂಡ್‌ನಲ್ಲಿ 0.25 ಚದರ ಕಿ.ಮೀ ಅತಿಕ್ರಮಣಗೊಂಡಿದೆ.

ಸರ್ಕಾರವು ಕಳೆದ ವರ್ಷ ಆಗಸ್ಟ್‌ನಲ್ಲಿ ಹಂಚಿಕೊಂಡಿದ್ದ ಮಾಹಿತಿ ಪ್ರಕಾರ 2022ರಲ್ಲಿ ಒಟ್ಟು 7,506.33 ಚದರ ಕಿ.ಮೀ. ಅರಣ್ಯ ಭೂಮಿಯನ್ನು ಒತ್ತುವರಿ ಮಾಡಲಾಗಿತ್ತು.

ಗೋವಾ, ಲಕ್ಷದ್ವೀಪ ಮತ್ತು ಪುದುಚೇರಿ ಅರಣ್ಯ ಪ್ರದೇಶದಲ್ಲಿ ಒತ್ತುವರಿ ನಡೆದಿಲ್ಲ ಎಂದು ಅಂಕಿ–ಅಂಶಗಳಲ್ಲಿ ಒತ್ತಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.