
ನವದೆಹಲಿ: 60ಕ್ಕೂ ಹೆಚ್ಚು ದೇಶಗಳ 700 ಸಂಸದರನ್ನೊಳಗೊಂಡ ‘ಸಂಸದರ ಫ್ರೆಂಡ್‌ಶಿಫ್ ಗ್ರೂಪ್’ಗಳನ್ನು ಲೋಕಸಭಾ ಸ್ಪೀಕರ್ ಓಂಬಿರ್ಲಾ ಅವರು ಸೋಮವಾರ ರಚಿಸಿದ್ದಾರೆ. ವಿರೋಧ ಪಕ್ಷಗಳ ಸದಸ್ಯರು ಸಹ ಈ ಗ್ರೂಪ್‌ನಲ್ಲಿದ್ದಾರೆ.
ಸ್ವಜನಪಕ್ಷಪಾತ ಎಸಗುತ್ತಿದ್ದಾರೆ ಎಂದು ಆರೋಪಿಸಿ ಸ್ಪೀಕರ್ ಸ್ಥಾನದಿಂದ ಓಂ ಬಿರ್ಲಾ ಅವರನ್ನು ವಜಾಗೊಳಿಸುವ ನಿರ್ಣಯವನ್ನು ವಿರೋಧ ಪಕ್ಷಗಳು ಕೈಗೊಂಡಿರುವ ಹೊತ್ತಿನಲ್ಲೇ ಈ ನಿರ್ಧಾರ ಪ್ರಕಟಗೊಂಡಿದೆ.
64 ಗುಂಪುಗಳನ್ನು ರಚಿಸಲಾಗಿದ್ದು, ಪ್ರತಿಯೊಂದು ಗುಂಪಿನಲ್ಲಿಯೂ ಕನಿಷ್ಠ ಒಬ್ಬ ಸಂಸದೆ ಸೇರಿದಂತೆ ತಲಾ 11 ಸಂಸದರು ಇರಲಿದ್ದಾರೆ. ಬಜೆಟ್ ಅಧಿವೇಶನದಲ್ಲಿ ಅಮಾನತುಗೊಂಡ ಸಂಸದರು ಸಹ ಈ ಗ್ರೂಪ್‌ಗಳಲ್ಲಿ ಸ್ಥಾನ ಪಡೆದಿದ್ದಾರೆ.
ವಿವಿಧ ದೇಶಗಳ ಶಾಸಕಾಂಗಗಳೊಂದಿಗೆ ಸಂವಾದ ನಡೆಸಲು ಹಾಗೂ ರಾಜತಾಂತ್ರಿಕತೆಗೆ ನಿರಂತರ ಸಂಸದೀಯ ಸಂವಹನದೊಂದಿಗೆ ಪೂರಕ ವಾತಾವರಣ ಸೃಷ್ಟಿಸಲು ಈ ಗುಂಪುಗಳನ್ನು ರಚಿಸಲಾಗಿದೆ ಎನ್ನಲಾಗಿದೆ.
ಕೆ.ಸಿ. ವೇಣುಗೋಪಾಲ್, ಗೌರವ್ ಗೊಗೊಯ್, ಶಶಿ ತರೂರ್, ಪಿ. ಚಿದಂಬರಂ (ಕಾಂಗ್ರೆಸ್), ಅಭಿಷೇಕ್ ಬ್ಯಾನರ್ಜಿ, ಡೆರೆಕ್ ಒಬ್ರಯಾನ್ (ತೃಣಮೂಲ ಕಾಂಗ್ರೆಸ್), ಅಖಿಲೇಶ್ ಯಾದವ್ (ಸಮಾಜವಾದಿ ಪಕ್ಷ), ಅಸಾದುದ್ದೀನ್ ಓವೈಸಿ (ಎಐಎಂಐಎಂ), ಅರವಿಂದ್ ಸಾವಂತ್ (ಶಿವಸೇನಾ– ಯುಬಿಟಿ), ಸುಪ್ರಿಯಾ ಸುಳೆ (ಎನ್‌ಸಿಪಿ–ಎಸ್‌ಪಿ), ಬಿಜೆಪಿ ನಾಯಕರಾದ ರವಿಶಂಕರ್ ಪ್ರಸಾದ್, ಬೈಜಯಂತ್ ಪಾಂಡಾ, ನಿಶಿಕಾಂತ್ ದುಬೆ, ಅನುರಾಗ್ ಠಾಕೂರ್ ಅವರು ಈ ಗ್ರೂಪ್‌ಗಳ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.